ಬೆಂಗಳೂರು: ನಮ್ಮ ಮೆಟ್ರೋ ಹಸಿರು ಬಣ್ಣದ ವಿಸ್ತೃತ ಮಾರ್ಗದಲ್ಲಿ ಗುರುವಾರ ಯಾವುದೇ ಉದ್ಘಾಟನೆ ಕಾರ್ಯಕ್ರಮವಿಲ್ಲದೇ ರೈಲು ಸಂಚಾರಕ್ಕೆ ಚಾಲನೆ ಸಿಕ್ಕಿದ್ದು, ಮೊದಲ ದಿನ ಆರು ಸಾವಿರಕ್ಕೂ ಅಧಿಕ ಮಂದಿ ಪ್ರಯಾಣಿಸಿದ್ದಾರೆ. ಈಗ ರೇಷ್ಮೆ ಸಂಸ್ಥೆಯಿಂದ ಹಸಿರು ಮಾರ್ಗದಲ್ಲಿ ತುಮಕೂರು ರಸ್ತೆಯ ಮಾದಾವರವರೆಗೆ ಮೆಟ್ರೋದಲ್ಲಿ ಸಂಚಾರ ನಡೆಸಬಹುದು.
ಗುರುವಾರ ಬೆಳಗ್ಗೆ 5 ಗಂಟೆಗೆ ಮಾದವಾರ ನಿಲ್ದಾಣದಿಂದ ಮೊದಲ ರೈಲು ಸಂಚಾರ ಆರಂಭಿಸಿತು. ಈ ವಿಸ್ತರಿಸಿದ ಮಾರ್ಗ 3.14 ಕಿ.ಮೀ ದೂರ ಹೊಂದಿದೆ. ಮಂಜುನಾಥ ನಗರ, ಚಿಕ್ಕಬಿದರಕಲ್ಲು (ಜಿಂದಾಲ್ ನಗರ), ಮಾದವರ (ಬಿಐಇಸಿ) ಸೇರಿ 3 ನಿಲ್ದಾಣಗಳಿವೆ. ಈ ಮಾರ್ಗದಿಂದಾಗಿ ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ ಜಾಲ 76.95 ಕಿ.ಮೀಗೆ ಹೆಚ್ಚಳವಾಗಿದೆ. ಹಸಿರು ಮಾರ್ಗದಲ್ಲೇ ಒಟ್ಟು 32 ನಿಲ್ದಾಣಗಳು ಆದಂತಾಗಿದೆ.
ಹೊಸ ಮೂರು ನಿಲ್ದಾಣಗಳಲ್ಲಿ ಗುರುವಾರ ಬೆಳಗ್ಗೆ 5ರಿಂದ ಸಂಜೆ 7 ಗಂಟೆಯವರೆಗೆ ಒಟ್ಟು ಮಂದಿ 6,032 ಮಂದಿ ಪ್ರವೇಶ ಹಾಗೂ 5061 ನಿರ್ಗಮಿಸಿದ್ದಾರೆ. ಪ್ರತಿ 10 ನಿಮಿಷಕ್ಕೆ ಈ ಮಾರ್ಗದಲ್ಲಿ ರೈಲು ಸೇವೆ ಲಭ್ಯವಿದೆ.
"ನಾಗಸಂದ್ರದಿಂದ ಮಾದಾವರವರೆಗಿನ ನಮ್ಮ ಮೆಟ್ರೋ ಹಸಿರು ಬಣ್ಣದ ವಿಸ್ತೃತ ಮಾರ್ಗದಿಂದ ನಿತ್ಯ 44 ಸಾವಿರ ಪ್ರಯಾಣಿಕರಿಗೆ ಪ್ರಯೋಜನವಾಗಲಿದೆ. ಬೆಂಗಳೂರು ಭಾರತದ 2ನೇ ಅತೇ ಉದ್ದದ ಮೆಟ್ರೋ ಜಾಲ ಹೊಂದಿದಂತಾಗಿದೆ. ನಮ್ಮ ಮೆಟ್ರೋಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರೋತ್ಸಾಹ ಸಾಕಷ್ಟಿದೆ" ಎಂದು ಬಿ.ಎಂ.ಆರ್.ಸಿ.ಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿ.ಎಲ್.ಯಶವಂತ್ ಚವ್ಹಾಣ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು.
ನಾಗಸಂದ್ರದಿಂದ ತುಮಕೂರು ರಸ್ತೆಯ ಮಾದಾವರದವರೆಗಿನ ನೂತನ ಮೆಟ್ರೋ ಮಾರ್ಗದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಬುಧವಾರ ಪ್ರಾಯೋಗಿಕ ಸಂಚಾರ ನಡೆಸಿದ್ದರು. ಈ ವೇಳೆ ಸಂಸದ ತೇಜಸ್ವಿ ಸೂರ್ಯ ಜೊತೆಗಿದ್ದರು. ಬಳಿಕ ಮಾತನಾಡಿದ್ದ ಡಿಕೆಶಿ, 2026ರ ವೇಳೆಗೆ 175 ಕಿ.ಮೀ ನೂತನ ಮೆಟ್ರೋ ಮಾರ್ಗ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ ಎಂದು ತಿಳಿಸಿದ್ದರು.
ಇದನ್ನೂ ಓದಿ: ದೀಪಾವಳಿ ಮುಗಿಸಿ ಬಂದ ಜನ: ನಮ್ಮ ಮೆಟ್ರೋ ಸ್ಟೇಷನ್ ಹೊರಗೆ 1 ಕಿ.ಮೀ ಕ್ಯೂ ನಿಂತ ಪ್ರಯಾಣಿಕರು!