ಮಂಡ್ಯ: ಮದ್ದೂರು ತಾಲೂಕಿನ ಮುದಗೆರೆ ಗ್ರಾಮದಲ್ಲಿ ಮಲೆನಾಡು ಗಿಡ್ಡ ಹಸುವಿನ ಸೀಮಂತ ಮಾಡುವ ಮೂಲಕ ಗ್ರಾಮದ ಮಂಡಲ ಬಿಜೆಪಿ ಅಧ್ಯಕ್ಷ ಯಜಮಾನ್ ಎಂ. ಎಸ್. ರಾಜಪ್ಪ ಅವರ ಕುಟುಂಬ ಗಮನ ಸೆಳೆದಿದೆ. ಹೆಣ್ಣು ಮಕ್ಕಳಿಗೆ ಸೀಮಂತ ಮಾಡುವ ರೀತಿಯಲ್ಲಿ ಕೊಬ್ಬರಿ, ಬೆಲ್ಲ, ಹೂವು, ಹಣ್ಣು, ಕಲ್ಲು ಸಕ್ಕರೆ, ಕರ್ಜೂರ, ಒಣ ದ್ರಾಕ್ಷಿ, ಗೋಡಂಬಿ, ಬಳೆ, ಅರಿಶಿಣ, ಕುಂಕುಮ, ಸೀರೆ ಸೇರಿದಂತೆ ಸೀಮಂತಕ್ಕೆ ಬಳಸುವ ವಸ್ತುಗಳನ್ನು ಇಟ್ಟು ವಿಶೇಷ ಪೂಜೆ ಸಲ್ಲಿಸಿ, ಸೀಮಂತ ಶಾಸ್ತ್ರ ಮಾಡಲಾಯಿತು.
ಸಾಂಪ್ರದಾಯಿಕವಾಗಿ ಹಸುವಿಗೆ ಉಡುಗೆಯನ್ನು ತೊಡಿಸಿ ಸಂಭ್ರಮ ಸಡಗರದಿಂದ ಬಂಧು ಬಾಂಧವರನ್ನು ಕರೆಸಿ, ಗ್ರಾಮಸ್ಥರೆಲ್ಲರಿಗೂ ಅಡುಗೆ ಮಾಡಿಸಿ ಉಣ ಬಡಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಹಸುವಿನ ಸೀಮಂತ ಮಾಡಿರುವುದು ನಾಡಿನ ಗಮನ ಸೆಳೆದಿದೆ.
ಮುದಿಗೆರೆ ಗ್ರಾಮದ ಬಿಜೆಪಿ ಮಂಡಲ ಅಧ್ಯಕ್ಷ ಯಜಮಾನ್ ಎಂ.ಎಸ್. ರಾಜಪ್ಪ ಅವರು ಮಾತನಾಡಿ, ರೈತರಿಗೆ ಸಾಕು ಪ್ರಾಣಿಗಳು ಮನೆಯ ಸದಸ್ಯರಿದ್ದಂತೆ. ಅವುಗಳನ್ನು ಚೆನ್ನಾಗಿ ನೋಡಿಕೊಂಡರೆ ನಾವು ಸಮೃದ್ಧವಾಗಿರುತ್ತೇವೆ. ನಮ್ಮ ಮನೆಯಲ್ಲಿ ಸಾಕುವ ಪ್ರಾಣಿಗಳನ್ನು ನಮ್ಮ ಮನೆಯ ಸದಸ್ಯರಂತೆ ನಾವು ಭಾವಿಸಿದ್ದೇವೆ. ನಮ್ಮ ಮನೆಯಲ್ಲಿ ಸೀಮಂತ ಮಾಡಿರುವುದರಿಂದ ಸಂಭ್ರಮ ಮನೆ ಮಾಡಿದೆ. ತಳಿರು ತೋರಣಗಳಿಂದ ಮನೆಯನ್ನು ಸಿಂಗರಿಸಿ, ವಿಶಿಷ್ಟ ಪೂಜಾ ಕೈಂಕರ್ಯಗಳನ್ನು ಕೈಗೊಂಡು ಗ್ರಾಮಸ್ಥರೆಲ್ಲರಿಗೂ ಅನ್ನ ಸಂತರ್ಪಣೆ ಮಾಡಿರುವುದು ನಮಗೆ ತೃಪ್ತಿ ತಂದಿದೆ. ಗೋವು ಇದ್ದರೆ ನಾವು ಉಳಿಯಲು ಸಾಧ್ಯ. ಗೋವು ಇಲ್ಲದಿದ್ದರೆ ನಮ್ಮ ಬದುಕು ಹಸನಾಗುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಸಾಕು ಪ್ರಾಣಿಗಳನ್ನು ತಮ್ಮ ಮನೆಯ ಸದಸ್ಯರಂತೆ ಭಾವಿಸಿ ಅವುಗಳನ್ನು ಪೋಷಣೆ ಮಾಡಬೇಕು ಎಂದು ತಿಳಿಸಿದರು.
ಸಾಕಮ್ಮ ಅವರು ಮಾತನಾಡಿ, ಹಸುವಿನ ಸೀಮಂತ ಮಾಡಿರುವುದು ವಿಶೇಷ ಮತ್ತು ವಿಶಿಷ್ಟವಾಗಿದೆ. ಇದೊಂದು ಮಾದರಿ ಕಾರ್ಯವಾಗಿದೆ. ಎಂ. ಎಸ್. ರಾಜಪ್ಪ ಅವರ ಪುತ್ರ ನವೀನ್ ಅವರು ಹಲವು ದಿನಗಳಿಂದ ಇಂಥದೊಂದು ಕಾರ್ಯಕ್ರಮ ಮಾಡಬೇಕು ಎಂದು ತಮ್ಮ ಮನೆಯಲ್ಲಿ ಚರ್ಚಿಸಿ ಇಂದು ಮನೆಯಲ್ಲಿ ಸೀಮಂತ ಮಾಡಿದ್ದಾರೆ. ಸಾಕು ಪ್ರಾಣಿಗಳು ರೈತನ ಜೀವನದ ಅವಿಭಾಜ್ಯ ಅಂಗವಾಗಿವೆ. ಉತ್ತಮ ಬದುಕು ಕಟ್ಟಿಕೊಳ್ಳಲು ಎಲ್ಲವನ್ನೂ ನೀಡುವ ಸಾಕು ಪ್ರಾಣಿಗಳನ್ನು ನಾವು ಗೌರವ ಮತ್ತು ಭಕ್ತಿಯಿಂದ ಕಾಣಬೇಕಾದದ್ದು ಧರ್ಮದ ಕಾರ್ಯ ಎಂದರು.
ಸೀಮಂತ ಕಾರ್ಯಕ್ರಮದಲ್ಲಿ ಪ್ರಭಾ, ಶಿಲ್ಪ, ನವೀನ್, ಸಾವಿತ್ರಿ, ರಾಕೇಶ್, ಕಿರಣ್, ಕೌಶಿಕ್, ಕಾರ್ತಿಕ್, ಸುದರ್ಶನ್, ಅನಿಲ್, ಲಕ್ಷ್ಮಣ, ಶಶಿಕುಮಾರ್, ನವೀನ್, ಸಾವಿತ್ರಿ ಸೇರಿದಂತೆ ಇತರರು ಇದ್ದರು.
ಇದನ್ನೂ ಓದಿ: ವಿಜಯನಗರ: ಎರಡು ಕಾಲಿರೋ ವಿಶಿಷ್ಟ ಕರುವಿಗೆ ಜನ್ಮ ನೀಡಿದ ಹಸು