ಮಂಡ್ಯ: ಮಳವಳ್ಳಿಯ ಈದ್ಗಾ ಮೊಹಲ್ಲಾ ವಾರ್ಡ್ ಅನ್ನು ಕಂಟೈನ್ಮೆಂಟ್ ಹಾಗೂ ಬಫರ್ ಜೋನ್ ಎಂದು ಘೋಷಿಸಲಾಗಿದ್ದು, ಅವರಿಗೆ ಎರಡು ತಿಂಗಳ ರೇಷನ್ ಮತ್ತು ಆಹಾರ ಪದಾರ್ಥ ಒದಗಿಸಲಾಗಿದೆ. ನಮ್ಮ ಆದೇಶ ಉಲ್ಲಂಘಿಸಿದರೆ ಜೈಲು ಶಿಕ್ಷೆ ಗ್ಯಾರಂಟಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಮಂಡ್ಯದಲ್ಲಿ ಅಧಿಕಾರಿಗಳ ಸಭೆ ನಡೆಸಿ,ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಾಲ್ಕು ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ನಿನ್ನೆ ಮೂವರಿಗೆ ಪಾಸಿಟಿವ್ ಆಗಿತ್ತು. ಇವತ್ತು ಒಬ್ಬರಿಗೆ ಪಾಸಿಟಿವ್ ಬಂದಿದೆ. ಇವತ್ತು ಪಾಸಿಟಿವ್ ಆಗಿರುವ ವ್ಯಕ್ತಿಗೆ ನಿನ್ನೆ ಪಾಸಿಟಿವ್ ಹಾಗೂ ನೆಗೆಟಿವ್ ಎರಡು ಬಂದಿರಲಿಲ್ಲ. ದೆಹಲಿಯ ನಿಜಾಮುದ್ದಿನ್ನಿಂದ ಬಂದಿದ್ದವರ ಸಂಪರ್ಕದಲ್ಲಿದ್ದರು. ಆರಂಭದಲ್ಲಿ ಇವರು ದೆಹಲಿ ವ್ಯಕ್ತಿಗಳ ಸಂಪರ್ಕದಲ್ಲಿರೋದನ್ನು ಒಪ್ಪಿಕೊಂಡಿರಲಿಲ್ಲ. ಪೊಲೀಸರ ಪ್ರವೇಶದ ನಂತರ ಒಪ್ಪಿಕೊಂಡರು ಎಂದರು.
ಮಂಡ್ಯದಲ್ಲಿ ಸದ್ಯ ವೆಂಟಿಲೇಟರ್ ಸಮಸ್ಯೆ ಇಲ್ಲ. ಮಂಡ್ಯದಲ್ಲಿ ತಬ್ಲಿಘಿ ಜಮಾತ್ನ ವ್ಯಕ್ತಿಗಳು ಅಕ್ಕಪಕ್ಕ ಇದ್ದರೆ ತಿಳಿಸಿಕೊಡಿ. ಇದುವರೆಗೆ ಮಂಡ್ಯದಲ್ಲಿ ಪತ್ತೆಯಾದ ಸೋಂಕಿತರು ಸ್ವಯಂ ಬಂದವರಲ್ಲ. ಪೊಲೀಸರು ಪತ್ತೆ ಹಚ್ಚಿರೋದು. ಕೊರೊನಾ ಸೋಂಕಿತರಿಗೆ ಅಗತ್ಯ ಚಿಕಿತ್ಸೆ ಕೊಡೋಕೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ. ದೆಹಲಿಯ ತಬ್ಲಿಘಿ ಜಮಾತ್ಗೆ 58 ವಿದೇಶದವರು ಬಂದಿದ್ರು. ಅವರೆಲ್ಲ ಜೊತೆಯಲ್ಲೇ ಸಭೆ, ಊಟ ಮಾಡಿದ್ದಾರೆ. ಸೋಂಕು ಅಲ್ಲೇ ಹರಡಿರುವ ಸಾಧ್ಯತೆಗಳಿವೆ ಎಂದರು.
ರಾಜ್ಯದ ಯಾವುದೇ ಇಲಾಖೆಯಲ್ಲಿ ದಿನಗೂಲಿ ನೌಕರರನ್ನ ತೆಗೆಯುವಂತಿಲ್ಲ. ಕೆಲಸದಿಂದ ತೆಗೆದರೆ ಸಂಬಂಧಿಸಿದ ಇಲಾಖೆಯ ಮುಖ್ಯಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕಾಗುತ್ತದೆ. ರಾಜ್ಯದಲ್ಲಿ ಕಲ್ಲಂಗಡಿ ಹಣ್ಣನ್ನು ಆಯಾ ಜಿಲ್ಲಾಡಳಿತವೇ ಖರೀದಿ ಮಾಡಲಿದೆ. ಖರೀದಿ ಮಾಡಿ ಉಚಿತವಾಗಿ ಜನರಿಗೆ ಹಂಚುವ ಕೆಲಸ ಮಾಡಲಿದೆ. ಲಾಕ್ಡೌನ್ ವಿಸ್ತರಿಸುವ ಬಗ್ಗೆ ನಾಳೆ ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಿ,ಕೇಂದ್ರಕ್ಕೆ ನಮ್ಮ ನಿಲುವು ತಿಳಿಸಲಿದ್ದೇವೆ ಎಂದರು.