ಬೆಂಗಳೂರು/ಮಂಡ್ಯ: ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸುತ್ತಿದ್ದು, ಹಳೆ ಮೈಸೂರು ಭಾಗದಲ್ಲಿ ಪಕ್ಷ ಬಲವರ್ಧನೆಗೆ ಪೂರಕವಾಗಿ ಮಂಡ್ಯದಲ್ಲಿ ಸಾರ್ವಜನಿಕ ಸಭೆ ಮತ್ತು ಬೆಂಗಳೂರಿನಲ್ಲಿ ಬೂತ್ ಅಧ್ಯಕ್ಷರ ಸಮಾವೇಶ ನಡೆಯಲಿದೆ. ಪಕ್ಷದ ನಾಯಕರ ಜೊತೆಯೂ ಸಭೆ ನಡೆಸಲು ಸಮಯ ನಿಗದಿಪಡಿಸಿದ್ದಾರೆ.
ಡಿ.29 ರಂದು ರಾತ್ರಿ 10.5ಕ್ಕೆ ಯಲಹಂಕ ವಾಯುನೆಲೆಗೆ ಆಗಮಿಸಲಿರುವ ಅಮಿತ್ ಶಾ ರಾತ್ರಿ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಡಿ.30 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 12.15 ರವರೆಗೆ ಸಮಯವನ್ನು ಕಾಯ್ದಿರಿಸಲಾಗಿದೆ. ಮಧ್ಯಾಹ್ನ 1.10ಕ್ಕೆ ಯಲಹಂಕ ವಾಯುನೆಲೆಯಿಂದ ಭಾರತೀಯ ವಾಯುಪಡೆ ಹೆಲಿಕಾಪ್ಟರ್ ಮೂಲಕ ಮಂಡ್ಯಕ್ಕೆ ಪ್ರಯಾಣಿಸಲಿದ್ದಾರೆ. 1.45 ರಿಂದ 3.15 ರವರೆಗೆ ಮಂಡ್ಯದ ಸರ್ಕಾರಿ ಬಾಲಕರ ಕಾಲೇಜು ಆವರಣದಲ್ಲಿ ನಡೆಯಲಿರುವ ಸಾರ್ವಜನಿಕ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ಸಂಜೆ 5.20ಕ್ಕೆ ಯಲಹಂಕ ವಾಯುನೆಲೆಗೆ ಅಮಿತ್ ಶಾ ವಾಪಸಾಗಲಿದ್ದು, 5.40ಕ್ಕೆ ಅರಮನೆ ಮೈದಾನಕ್ಕೆ ಭೇಟಿ ನೀಡಲಿದ್ದಾರೆ. ಸಂಜೆ 6.45 ರವರೆಗೆ ಸಹಕಾರಿ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಅಂದು ರಾತ್ರಿ 8 ರಿಂದ 9.30ರವರೆಗೆ ಪಕ್ಷದ ಮುಖಂಡರ ಜೊತೆ ಸಭೆ ನಡೆಸಲು ಸಮಯ ಕಾಯ್ದಿರಿಸಿದ್ದಾರೆ. ಈ ವೇಳೆ ಪಕ್ಷ ಸಂಘಟನೆ, ಪಕ್ಷಕ್ಕೆ ಎದುರಾಗಿರುವ ಸವಾಲುಗಳು ಸೇರಿದಂತೆ ಸಂಘಟನಾತ್ಮಕ ವಿಚಾರಗಳ ಕುರಿತು ರಾಜ್ಯ ನಾಯಕರ ಜೊತೆ ಮಾತುಕತೆ ನಡೆಸಲಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಪ್ರತ್ಯೇಕವಾಗಿ ಮಾತುಕತೆ ನಡೆಸಿ ಸಚಿವ ಸಂಪುಟ ವಿಸ್ತರಣೆ ವಿಚಾರದ ಕುರಿತು ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ. ನಾಯಕರ ಜೊತೆಗಿನ ಸಭೆ ನಂತರ ರಾತ್ರಿ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಅಮಿತ್ ಶಾ ವಾಸ್ತವ್ಯ ಹೂಡಲಿದ್ದಾರೆ.
ಡಿ. 31 ರಂದು ಬೆಳಗ್ಗೆ 8.30 ರಿಂದ 9.30 ರವರೆಗೆ ಪಕ್ಷದ ಮುಖಂಡರ ಜೊತೆ ಉಪಹಾರ ಕೂಟ ನಡೆಸಲಿದ್ದಾರೆ. ಈ ವೇಳೆಯೂ ರಾಜಕೀಯ ವಿಚಾರಗಳ ಕುರಿತು ನಾಯಕರ ಜೊತೆ ಸಮಾಲೋಚನೆ ನಡೆಸಿ ಸದ್ಯದ ಪರಿಸ್ಥಿತಿಯ ಅವಲೋಕನ ಮಾಡಲಿದ್ದಾರೆ. ನಂತರ ದೇವನಹಳ್ಳಿ ತಾಲ್ಲೂಕಿನ ಅವತಿ ಗ್ರಾಮಕ್ಕೆ ತೆರಳಲಿದ್ದು, 11 ರಿಂದ 12.30 ರವರೆಗೆ ನಡೆಯಲಿರುವ ಭೂಮಿ ಪೂಜೆ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 1 ರಿಂದ 2.30 ರವರೆಗೆ ಮಲ್ಲೇಶ್ವರಂನ ಸೌಹಾರ್ಧ ಸಹಕಾರಿ ಫೆಡರೇಷನ್‌ಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 3 ಗಂಟೆಯಿಂದ 4.30ರವರೆಗೆ ಬೂತ್ ಅಧ್ಯಕ್ಷರು ಮತ್ತು ಬೂತ್ ಮಟ್ಟದ ಏಜೆಂಟ್ಗಳ ಸಭೆಯನ್ನು ಅರಮನೆ ಮೈದಾನದಲ್ಲಿ ನಡೆಸಲಿದ್ದಾರೆ. ಸಂಜೆ 5.05 ಗಂಟೆಗೆ ಯಲಹಂಕ ವಾಯುನೆಲೆಯಿಂದ ದೆಹಲಿಗೆ ತೆರಳುವರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಪತ್ರಿಕಾ ಹೇಳಿಕೆ ನೀಡಿದ್ದು, ಅಮಿತ್ ಶಾ ಅವರ ಈ ಭೇಟಿಯು ಪಕ್ಷದ ಗೆಲುವಿನ ಓಟಕ್ಕೆ ಮತ್ತಷ್ಟು ಶಕ್ತಿ ತುಂಬಲಿದೆ. ಮೈಸೂರು ಭಾಗದಲ್ಲಿ ಮಾತ್ರವಲ್ಲದೆ ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿನ ಕಾರ್ಯತಂತ್ರ ರೂಪಿಸುವ ನಿಟ್ಟಿನಲ್ಲಿ ಅವರ ಭೇಟಿ ಅತ್ಯಂತ ಮಹತ್ವದ್ದಾಗಲಿದೆ ಎಂದು ತಿಳಿಸಿದ್ದಾರೆ.
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಡಿ.30 ರಂದು ಮಂಡ್ಯ ವಿಶ್ವವಿದ್ಯಾನಿಲಯದ ಆವರಣದಲ್ಲಿ ಬೃಹತ್ ಬಿಜೆಪಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಿಂದ ಸುಮಾರು 1 ಲಕ್ಷ ಮಂದಿ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗಿಯಾಗಲಿದ್ದು, ವಿಧಾನಸಭೆ ಚುನಾವಣೆಗೆ ಬಿಜೆಪಿ ಪಕ್ಷವನ್ನು ಸದೃಢಗೊಳಿಸಲು ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಇದನ್ನೂ ಓದಿ: ಉಗ್ರರ ಪರ ಹೇಳಿಕೆ ಕೊಡಲು ನನಗೇನು ತಲೆ ಕೆಟ್ಟಿದೆಯಾ?-ಡಿಕೆಶಿ, ಕ್ಷಮೆ ಕೇಳುವಂತೆ ಸಿ.ಟಿ.ರವಿ ಆಗ್ರಹ