ಮಂಡ್ಯ: ಅಂಬಿ ಅಭಿಮಾನಿಗಳಿಗಿಂತ ಸಿಎಂ ಕುಮಾರಸ್ವಾಮಿಗೆ ಹತ್ತು ಪಟ್ಟು ಅಭಿಮಾನಿಗಳು ಇದ್ದಾರೆಂದು ಸಚಿವ ಡಿಸಿ ತಮ್ಮಣ್ಣ ಹೇಳಿಕೆ ನೀಡಿದ್ದರು. ಹೀಗಾಗಿ ಅಂಬಿ ಅಭಿಮಾನಿವೋರ್ವ ಅದನ್ನು ಸಾಬೀತುಪಡಿಸಿ ಎಂದು ಸಚಿವರಿಗೆ ಸವಾಲು ಹಾಕಿದ್ದಾರೆ.
ಮದ್ದೂರು ತಾಲೂಕಿನ ದಸಂಸ ಮುಖಂಡ ಶಿವರಾಜ್ ಮರಳಿಗ ಅವರು, ಒಂದು ವೇಳೆ ಅಂಬಿಗಿಂತ ಹೆಚ್ಡಿಕೆಗೇ ಅಭಿಮಾನಿಗಳು ಹೆಚ್ಚಿರುವುದನ್ನು ಸಾರಿಗೆ ಸಚಿವರು ಸಾಬೀತು ಪಡಿಸಿದರೆ ಜೀವನ ಪರ್ಯಂತ ತಾನು ಮೀಸೆ ಬಿಡುವುದಿಲ್ಲ. ಇದಕ್ಕೆ ಸಚಿವರು ಉತ್ತರಿಸಬೇಕು ಎಂದೂ ಬಹಿರಂಗವಾಗೇ ಸವಾಲು ಹಾಕಿದ್ದಾರೆ.
ಜಿಲ್ಲೆಯಲ್ಲಿ ಶೇ. 70ರಷ್ಟು ಅಂಬಿ ಅಭಿಮಾನಿಗಳೇ ಇರೋದು. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಏಕೆ ಈ ಹೇಳಿಕೆ ನೀಡಿದರೋ ಗೊತ್ತಿಲ್ಲ. ಆದರೆ ಈ ಸವಾಲಿಗೆ ನಾನು ಬದ್ಧ. ಇದಕ್ಕೆ ಸಾರಿಗೆ ಸಚಿವರು ಪ್ರತಿಕ್ರಿಯಿಸಬೇಕು ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ ಶಿವರಾಜ್.
ಸಚಿವರಿಗೆ ಅಂಬರೀಶ್ ಅಭಿಮಾನಿ ಹಾಕಿರುವ ಸವಾಲಿನ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.