ಮಂಡ್ಯ: ಎಡಿಜಿಪಿ ಅಲೋಕ್ ಕುಮಾರ್ ನಿಮಿಷಾಂಭ ದೇವಿ ಸನ್ನಿಧಿಗೆ ಬಂದು ಹರಕೆ ತೀರಿಸಿದ್ದಾರೆ. ಪೊಲೀಸರಿಗೆ ವಂಚಿಸಿ ತಲೆ ಮರೆಸಿಕೊಂಡು ಓಡಾಡುತ್ತಿದ್ದ ಸ್ಯಾಂಟ್ರೋ ರವಿ ಬಂಧನ ಆಗಿರುವ ಕಾರಣ ನಿಮಿಷಾಂಭ ದೇವಾಲಯಕ್ಕೆ ಭೇಟಿ ಕೊಟ್ಟು ಹರಕೆ ತೀರಿಸಿದ್ದಾರೆ. ಎರಡು ದಿನಗಳ ಹಿಂದಷ್ಟೇ ದೇಗುಲಕ್ಕೆ ಭೇಟಿ ನೀಡಿ ದೇವಿಯಲ್ಲಿ ಹರಕೆ ಹೇಳಿಕೊಂಡಿದ್ದರು.
ದೇವರ ದರ್ಶನ ಪಡೆದು ವಿಶೇಷ ಪೂಜೆ ಮಾಡಿಸಿದ ನಂತರ ಮಾಧ್ಯಮಗಳನ್ನುದ್ಧೇಶಿಸಿ ಅಲೋಕ್ ಕುಮಾರ್ ಮಾತನಾಡಿದರು. ಎರಡು ದಿನಗಳ ಹಿಂದೆ ದೇವಲಯಕ್ಕೆ ಭೇಟಿ ಕೊಟ್ಟಿದ್ದಾಗ ಸ್ಯಾಂಟ್ರೋ ರವಿ ಶೀಘ್ರವಾಗಿ ಬಂಧನವಾದರೆ ಮತ್ತೆ ಬಂದು ವಿಶೇಷ ಪೂಜೆ ಸಲ್ಲಿಸುವುದಾಗಿ ದೇವಿ ಬಳಿ ಕೇಳಿಕೊಂಡಿದ್ದೆ. ದೇವಿ ಬಳಿ ಹರಕೆ ಹೊತ್ತು ಹೋಗಿದ್ದ 24 ಗಂಟೆಯೊಳಗೆ ಪೊಲೀಸರಿಗೆ ಆರೋಪಿ ಸ್ಥಳ ಪತ್ತೆಯಾಗಿ ಆತನನ್ನು ಬಂಧಿಸಿದ್ದೇವೆ. ಹೀಗಾಗಿ ದೇವಿಗೆ ಹೊತ್ತುಕೊಂಡಿದ್ದ ಹರಕೆ ತೀರಿಸಿದ್ದೇನೆ ಎಂದು ತಿಳಿಸಿದರು.
ಹರಕೆ ಬಗ್ಗೆ ಮುಕ್ತವಾಗಿ ಮಾತನಾಡಿದ ಎಡಿಜಿಪಿ: ರಾಜ್ಯ ಸರ್ಕಾರಕ್ಕೆ ಮತ್ತು ಪೊಲೀಸ್ ಇಲಾಖೆಗೆ ಈ ಪ್ರಕರಣದಿಂದ ಕೆಟ್ಟ ಹೆಸರು ಬರುತ್ತಿತ್ತು. ಮಾಧ್ಯಮಗಳಲ್ಲಿ ದೂರು ನೀಡಿ 10 ದಿನ ಆದರೂ ಬಂಧನ ಆಗಿಲ್ಲ ಎಂದು ಪ್ರಸಾರವಾಗುತ್ತಿತ್ತು. ಅಲ್ಲದೇ ವೈಯುಕ್ತಿಕವಾಗಿ ನನಗೆ ಹಿನ್ನೆಡೆಯಾದಂತೆ ಆಗಿತ್ತು. ಇದರಿಂದ ಆದಷ್ಟು ಬೇಗ ಬಂಧನ ಆಗಬೇಕು ಎಂದು ದೇವಿಯಲ್ಲಿ ಬಂದು ಕೇಳಿಕೊಂಡು ಹೋಗಿದ್ದೆ. ಅದರಂತೆ ಆರೋಪಿ ಸೆರೆಗೆ ಸಿಕ್ಕಿದ್ದಾನೆ ಅಕ್ಕಾಗಿ ಬಂದು ಹರಕೆ ತೀರಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
’’ಈ ಹಿಂದೆ 2011ನೇ ಇಸವಿಯಲ್ಲಿ ಹುಣಸೂರಿನಲ್ಲಿ ಡಬಲ್ ಮರ್ಡರ್ ಕೇಸ್ ಆಗಿತ್ತು ಆಗಲೂ ಆರೋಪಿಗಳನ್ನು ಬಂಧಿಸುವ ಬಗ್ಗೆ ದೇವಿಯಲ್ಲಿ ಕೇಳಿಕೊಂಡಿದ್ದೆ. ಅಂದು ಹರಕೆ ಮಾಡಿದ ಕೇವಲ ಐದು ಗಂಟೆಗಳಲ್ಲಿ ಆರೋಪಿಗಳು ಪತ್ತೆಯಾಗಿದ್ದರು. ಇಲ್ಲಿ ಹರಕೆ ಹೊತ್ತು ಮೈಸೂರು ತಲುವ ವೇಳೆಗಾಗಲೇ ಆರೋಪಿಗಳ ಬಂಧನ ಆಗಿತ್ತು. ಅಂದು ಇಡೀ ತಂಡದೊಂದಿಗೆ ಬಂದು ದೇವಿಗೆ ಪೂಜೆ ಸಲ್ಲಿಸಿದ್ದೆ" ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.
ಸ್ಯಾಂಟ್ರೋ ರವಿ ಬಂಧನ: ನಿನ್ನೆ ಗುಜರಾತ್ನ ಅಹಮದಾಬಾದ್ನಲ್ಲಿ ಸ್ಯಾಂಟ್ರೋ ರವಿ ಮೈಸೂರು ಪೋಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದ. ಆತನ ವಿರುದ್ಧ ಕೇಸ್ ದಾಖಲಾದಾಗಿನಿಂದ ಪೊಲೀಸರು ಹುಡುಕಾಟ ಆರಂಭಿಸಿದ್ದರು. ಆದರೆ, ಆತ ತಲೆ ಮರೆಸಿಕೊಂಡು ಓಡಾಡುತ್ತಿದ್ದ. ಮೈಸೂರು ಪೊಲೀಸರು ಎಂಟು ತಂಡಗಳನ್ನು ಮಾಡಿ ರಾಜ್ಯ ಹಾಗೂ ಹೊರ ರಾಜ್ಯದಲ್ಲಿ ಆತನಿಗಾಗಿ ಹುಡಿಕಾಟ ಮಾಡಿದ್ದರು.
ನಿನ್ನೆ ಗುಜರಾತ್ ಪೊಲೀಸರ ಸಹಾಕಾರದೊಂದಿಗೆ ಸ್ಯಾಂಟ್ರೋ ರವಿಯನ್ನು ಬಂಧಿಸಲಾಗಿದೆ. ಇಂದು ಬೆಳಗ್ಗೆ ಬೆಂಗಳೂರಿಗೆ ವಿನಮಾನದ ಮೂಲಕ ಕರೆತಂದು ಮೈಸೂರಿನ ಠಾಣೆಗೆ ಕರೆದೊಯ್ಯಲಾಗಿದೆ. ಅಲ್ಲಿ ಪ್ರಾಥಮಿಕ ಹೇಳಿಕೆಗಳನ್ನು ಲಿಖಿತ ರೂಪದಲ್ಲಿ ಪಡೆದುಕೊಂಡಿರುವ ಪೊಲೀಸರು, ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಈ ಬಗ್ಗೆ ಇಂದು ಹೇಳಿಕೆ ನೀಡಿರುವ ಅಲೋಕ್ ಕುಮಾರ್ ಅವರು ಸ್ಯಾಂಟ್ರೋ ರವಿಯ ಮೇಲೆ ಹಲವು ಪ್ರಕರಣಗಳಿದ್ದರೂ ಸಧ್ಯಕ್ಕೆ ಸಂತ್ರಸ್ತೆ ನೀಡಿದ ದೂರಿನ ಅನ್ವಯ ತನಿಖೆ ಕೈಗೊಳ್ಳಲಾಗಿವುದು. ಕೇಸ್ ದಾಖಲಾದ ನಂತರ ಅವನು ಎಲ್ಲೆಲ್ಲಿ ತಪ್ಪಿಸಿಕೊಂಡು ಓಡಾಡಿದ್ದಾನೆ ಎಂಬುದರ ಬಗ್ಗೆ ಕೇಳಲಾಗಿದ್ದು, ಮಾಹಿತಿ ನೀಡಿದ್ದಾನೆ. ಪೊಲೀಸರಿಗೆ ಸಿಕ್ಕ ಮಾಹಿತಿಯಂತೆ ಆತನ ಚಲನವಲನ ಇದ್ದದ್ದು ತಿಳಿದು ಬಂದಿದೆ. ಆತನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನಂತರ ಕೇಸ್ ಕುರಿತಾಗಿ ಹೆಚ್ಚಿನ ತನಿಖೆ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮೈಸೂರು: ಸ್ಯಾಂಟ್ರೋ ರವಿ ತನಿಖೆಗೆ ಸಹಕರಿಸುತ್ತಿದ್ದಾನೆ: ಎಡಿಜಿಪಿ ಅಲೋಕ್ ಕುಮಾರ್