ಮಂಡ್ಯ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಮಹಿಳೆಯರ ದೇಹವನ್ನು ತುಂಡರಿಸಿ ನಾಲೆಯಲ್ಲಿ ಎಸೆದು ಹೋಗಿದ್ದ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹಣಕಾಸಿನ ವಿಚಾರಕ್ಕೆ ಈ ಕೃತ್ಯವೆಸಗಿದ್ದ ಮಹಿಳೆ ಸಹಿತ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಕೊಲೆ ಪ್ರಕರಣದ ಆರೋಪಿಗಳು: ಗುರುವಾರ ಸುದ್ದಿಗೋಷ್ಠಿಯಲ್ಲಿ ದಕ್ಷಿಣ ವಲಯ ಪೊಲೀಸ್ ಮಹಾನಿರೀಕ್ಷಕ ಪ್ರವೀಣ್ ಪವಾರ್ ಪ್ರಕರಣದ ಮಾಹಿತಿ ನೀಡಿದ್ದಾರೆ. ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕುದೂರು ಹೋಬಳಿಯ ಕೋಡಿಹಳ್ಳಿ ಕಾಲೋನಿ ನಿವಾಸಿ ಹಾಗೂ ಪಾಂಡವಪುರ ತಾಲೂಕಿನ ಹರವು ಗ್ರಾಮದ ಮಹಿಳೆಯನ್ನು ಬಂಧಿಸಲಾಗಿದೆ. ಇವರಿಬ್ಬರು ಮೂರು ಕೊಲೆಗಳನ್ನು ಮಾಡಿದ್ದು, ಮತ್ತೆ 5 ಕೊಲೆಗಳಿಗೆ ಸಂಚು ರೂಪಿಸಿದ್ದರು. ಕಾನೂನಿನ ನಿಯಮದಂತೆ ಆರೋಪಿಗಳ ಹೆಸರನ್ನು ಬಹಿರಂಗಪಡಿಸಲಿಲ್ಲ.
ದೇಹಗಳನ್ನು ಅರ್ಧಕ್ಕೆ ತುಂಡರಿಸಿದ್ರು.. ಹಣಕಾಸಿನ ವ್ಯವಹಾರ, ವೈಯಕ್ತಿಕ ಕಾರಣಕ್ಕೆ ಕೊಲೆಗಳನ್ನು ಮಾಡಲಾಗಿದೆ. ಕೊಲೆಯಾದ ಇಬ್ಬರು ಮಹಿಳೆಯರು ಆರೋಪಿಗಳಿಗೆ ಹಿಂದೆಯೇ ಪರಿಚಯವಿದ್ದು, ಗಾರ್ಮೆಂಟ್ಸ್ ಮತ್ತು ನರ್ಸಿಂಗ್ ಹೋಂಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಇಬ್ಬರನ್ನೂ ಮೇಟಗಳ್ಳಿಯ ಬಾಡಿಗೆ ಮನೆಗೆ ಕರೆಸಿಕೊಂಡು ಕೊಲೆ ಮಾಡಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಪಾರ್ವತಿ, ಚಾಮರಾಜನಗರದ ಗೀತಾ ಅಲಿಯಾಸ್ ಪುಟ್ಟಿ ಕೊಲೆಯಾದವರು. ಪಾರ್ವತಿಯನ್ನು ಮೇ. 30ರಂದು, ಗೀತಾಳನ್ನು ಜೂ. 3ರಂದು ಕೊಲೆ ಮಾಡಲಾಗಿತ್ತು. ಶವಗಳನ್ನು ಬೈಕ್‌ಗಳಲ್ಲಿ ಸಾಗಿಸುವುದು ಕಷ್ಟವೆಂಬ ಕಾರಣಕ್ಕೆ ದೇಹಗಳನ್ನು ಅರ್ಧಕ್ಕೆ ತುಂಡರಿಸಿ ಬೇರೆ ಬೇರೆ ಕಡೆ ಬಿಸಾಡಿಸಿದ್ದರು ಎಂದು ಪ್ರಕರಣದ ಕುರಿತು ಪ್ರವೀಣ್ ಪವಾರ್ ವಿವರಿಸಿದರು.
ಹಿನ್ನೆಲೆ: ಜೂ.7ರಂದು ಪಾಂಡವಪುರ ತಾಲೂಕಿನ ಬೇಬಿ ಗ್ರಾಮದ ಕೆರೆಕೋಡಿ ಕಟ್ಟೆ ಕೆಳಗೆ ಹರಿಯುವ ನೀರಿನಲ್ಲಿ 30-32 ವರ್ಷ ವಯಸ್ಸಿನ ಅಪರಿಚಿತ ಮಹಿಳೆ ಹಾಗೂ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದ ಮಾಡರಹಳ್ಳಿ ರಸ್ತೆ ಬಳಿ ಸಿಡಿಎಸ್ ನಾಲೆಗೆ ಸಂಪರ್ಕಿಸುವ ಸಾಲೋಡು ಹಳ್ಳದ ಪಕ್ಕದ ಕೈಲ ಭತ್ತದ ಗದ್ದೆಯಲ್ಲಿ 40-45 ವರ್ಷ ವಯಸ್ಸಿನ ಮತ್ತೊಬ್ಬ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದ್ದವು.
ಎರಡೂ ಪ್ರಕರಣಗಳಲ್ಲಿ ತುಂಡರಿಸಿದ್ದ ಮಹಿಳೆಯರ ಅರ್ಧ ದೇಹಗಳು ಮಾತ್ರ ಪತ್ತೆಯಾಗಿದ್ದವು. ಎರಡೂ ಶವಗಳಲ್ಲಿ ಸೊಂಟದಿಂದ ಮೇಲ್ಭಾಗದ ದೇಹವೇ ಇರಲಿಲ್ಲ. ಇದರಿಂದಾಗಿ ಗುರುತು ಪತ್ತೆಯಾಗದ ಹಿನ್ನೆಲೆಯಲ್ಲಿ ಮಂಡ್ಯ ಕೊಲೆ ಪ್ರಕರಣಗಳು ಪೊಲೀಸರಿಗೆ ಸವಾಲಾಗಿದ್ದವು.
1,116ಕ್ಕೂ ಹೆಚ್ಚು ನಾಪತ್ತೆ ಪ್ರಕರಣಗಳ ಪರಿಶೀಲನೆ: ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿರಕ್ಕೂ ಹೆಚ್ಚು ಕರ ಪತ್ರಗಳನ್ನು ಅಕ್ಕಪಕ್ಕದ ಜಿಲ್ಲೆಗಳಲ್ಲಿ ಹಂಚಿಕೆ ಮಾಡಿ ಮೃತರ ಗುರುತು ಪತ್ತೆಗಾಗಿ ಜನರು ಹಾಗೂ ಪೊಲೀಸರ ಸಹಕಾರ ಕೋರಲಾಗಿತ್ತು. ಜೊತೆಗೆ 9 ತನಿಖಾ ತಂಡಗಳನ್ನು ರಚಿಸಿ, ತಾಂತ್ರಿಕ ಮಾಹಿತಿ ಕಲೆ ಹಾಕಲು 2 ತಾಂತ್ರಿಕ ಪರಿಣಿತ ತಂಡಗಳನ್ನು ರಚಿಸಲಾಗಿತ್ತು. ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ 1,116ಕ್ಕೂ ಹೆಚ್ಚಿನ ಮಹಿಳೆಯರು ಕಾಣೆಯಾದ ಪ್ರಕರಣಗಳನ್ನು ಪರಿಶೀಲಿಸಲಾಗಿತ್ತು.
ಇದನ್ನೂ ಓದಿ: ಕಾರವಾರ: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ, ವೃದ್ಧನಿಗೆ 20 ವರ್ಷ ಜೈಲು ಶಿಕ್ಷೆ
ಗೀತಾ ಕಾಣೆಯಾಗಿದ್ದ ಪ್ರಕರಣ ಜು.7ರಂದು ಚಾಮರಾಜ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಎರಡೂ ಪ್ರಕರಣಗಳಲ್ಲಿ ಸಾಮ್ಯತೆ ಇದ್ದವು. ಗೀತಾಳ ಮೊಬೈಲ್ ಕರೆಗಳನ್ನು ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಪ್ರವೀಣ್ ಪವಾರ್ ವಿವರಿಸಿದರು. ವಿಚಾರಣೆ ವೇಳೆ ಬೆಂಗಳೂರಿನಲ್ಲಿ ಕುಮುದಾ ಎಂಬ ಮತ್ತೊಬ್ಬ ಮಹಿಳೆಯನ್ನು ಕೊಲೆ ಮಾಡಿ ಚಿತ್ರದುರ್ಗದವರೆಗೆ ಬೈಕ್‌ನಲ್ಲೇ ತಂದಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.