ಮಂಡ್ಯ: ಸಕ್ಕರೆ ನಗರಿ ಮಂಡ್ಯ ಜಿಲ್ಲೆಯಲ್ಲಿ ಇಂದು ಒಂದೇ ದಿನದಲ್ಲಿ 8 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಮುಂಬೈನಿಂದ ಬಂದ ಮೂವರಿಗೆ, ಇವರ ಜೊತೆ ಸಂಪರ್ಕ ಹೊಂದಿದ್ದ ಓರ್ವ ಸೇರಿದಂತೆ ತಬ್ಲಿಘಿ ಸಂಪರ್ಕದ ನಾಲ್ವರಲ್ಲಿ ಕೊರೊನಾ ಪತ್ತೆಯಾಗಿದೆ.
ಏಪ್ರಿಲ್ 23 ರಂದು ಮುಂಬೈನಿಂದ ಹೆಚ್. ಕೋಡಗಹಳ್ಳಿಗೆ ಮೃತ ವ್ಯಕ್ತಿಯ ಶವವನ್ನು ತಂದು ಅಂತ್ಯಕ್ರಿಯೆ ಮಾಡಿದ್ದ ಇಬ್ಬರು ಪುರುಷರು, ಓರ್ವ ಮಹಿಳೆ, ಇವರ ಜೊತೆ ಸಂಪರ್ಕ ಹೊಂದಿದ್ದ ಕೆ.ಆರ್.ಪೇಟೆಯ ಓರ್ವ ಮಹಿಳೆಯಲ್ಲಿ ಕೋವಿಡ್ 19 ಪತ್ತೆಯಾಗಿದೆ.
ಇನ್ನು ತಬ್ಲಿಘಿ ಸಂಪರ್ಕ ಹೊಂದಿದ್ದ ಮೂವರು ಪುರುಷರು ಹಾಗೂ ಓರ್ವ ಮಹಿಳೆಯಲ್ಲಿ ಕೋವಿಡ್ 19 ಪತ್ತೆಯಾಗಿದ್ದು, ಜನರು ಆತಂಕಗೊಂಡಿದ್ದಾರೆ. ಮೂರು ದಿನಗಳಿಂದ ಯಾವುದೇ ಪ್ರಕರಣ ದಾಖಲಾಗಲಿಲ್ಲ ಎಂದು ಖುಷಿಯಲ್ಲಿದ್ದ ಜಿಲ್ಲೆಯ ಜನತೆಯಲ್ಲೀಗ ಆತಂಕ ಮನೆ ಮಾಡಿದೆ.
ಜಿಲ್ಲೆಯಲ್ಲಿ ಒಂದೇ ದಿನ 8 ಪ್ರಕರಣಗಳು ದಾಖಲಾಗಿದ್ದು, ಇದೀಗ ಒಟ್ಟು 26 ಪ್ರಕರಣಗಳಾಗಿದ್ದು, ಈಗಾಗಲೇ 4 ಮಂದಿ ಗುಣಮುಖರಾಗಿದ್ದಾರೆ. ಇದೀಗ ಜಿಲ್ಲೆ ರೆಡ್ ಝೋನ್ ಆಗುವ ಎಲ್ಲಾ ಸಂಭವ ಹೆಚ್ಚಾಗಿದೆ.