ಮಂಡ್ಯ: ಕೊಟ್ಟಿಗೆಯಲ್ಲಿದ್ದ 21 ಮೇಕೆಗಳು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, 30 ಮೇಕೆಗಳು ಅಸ್ವಸ್ಥಗೊಂಡಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪಾಲಹಳ್ಳಿ ಗ್ರಾಮದ ಶ್ರೀನಿವಾಸ್ ಅವರು 51 ಮೇಕೆಗಳನ್ನು ಮನೆ ಕೊಟ್ಟಿಗೆಯಲ್ಲಿ ಕೂಡಿ ಹಾಕಿದ್ದರು. ಮುಂಜಾನೆ 4 ಗಂಟೆಗೆ ನೋಡಿದಾಗ ಒಂದರ ಹಿಂದೆ ಒಂದರಂತೆ ಮೇಕೆಗಳು ಹೊಟ್ಟೆ ಉಬ್ಬರಿಸಿಕೊಂಡು ಸಾವನ್ನಪ್ಪಿವೆ. ತಕ್ಷಣವೇ ರೈತ ಪಾಲಹಳ್ಳಿ ಪಶುಸಂಗೋಪನಾ ಇಲಾಖೆ ವೈದ್ಯರಿಗೆ ವಿಷಯ ತಿಳಿಸಿದ್ದಾರೆ. ಈ ವೇಳೆ ಪಶುವೈದ್ಯ ಸ್ಥಳಕ್ಕೆ ಭೇಟಿ ನೀಡಿ ಹಲವು ಮೇಕೆಗಳಿಗೆ ಚಿಕಿತ್ಸೆ ನೀಡಿದ್ದಾರೆ.
ಮೇಕೆಗಳ ನಿಗೂಢ ಸಾವಿನ ಕುರಿತು ಕಾರಣ ತಿಳಿಯಲು ಮೃತ ಮೇಕೆಗಳ ಕಳೆಬರಹವನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ. ಮೇಕೆಗಳು ಸೇವಿಸಿದ ಆಹಾರ ವಿಷಪೂರಿತವಾಗಿತ್ತಾ? ಅಥವಾ ಮೇವಿನಲ್ಲಿ ಯಾರಾದರೂ ವಿಷಕಾರಿ ಪದಾರ್ಥ ತಿನ್ನಿಸ ಸೇರಿಸರಬುಹುದೆಂಬ ಅನುಮಾನ ಮೂಡಿದೆ.
ಮೇಕೆಗಳ ನಿಗೂಢ ಸಾವಿನಿಂದ ರೈತ ಶ್ರೀನಿವಾಸ್‌ಗೆ ಸುಮಾರು 2 ಲಕ್ಷಕ್ಕೂ ಅಧಿಕ ನಷ್ಟವಾಗಿದ್ದು, ನೆರವಿಗಾಗಿ ತಾಲೂಕು ಆಡಳಿತದ ಮೊರೆ ಹೋಗಿದ್ದಾರೆ.