ಮಂಡ್ಯ: ಕಾಚಳ್ಳಿ ಹಣ್ಣು ಸೇವಿಸಿ 12 ಮಂದಿ ಅಸ್ವಸ್ಥರಾಗಿರುವ ಘಟನೆ ತಾಲೂಕಿನ ಬಿ.ಹೊಸೂರು ಗ್ರಾಮದಲ್ಲಿ ನಡೆದಿದೆ. ಉತ್ತರಪ್ರದೇಶದಿಂದ ಆಲೆಮನೆ ಕೆಲಸಕ್ಕೆಂದು ಬಂದಿರುವ ಕಾರ್ಮಿಕರು ಇದೀಗ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಉತ್ತರ ಪ್ರದೇಶದ ಕಾರ್ಮಿಕರಾದ ಅನಂತ್ (16), ಸದ್ಧಾಂ(26), ನಾಜೀಂ(17), ವಸೀಮ್(32), ಶಾಕೀಂ(22), ಬಿ.ಹೊಸೂರು ಗ್ರಾಮದ ಜಗದೀಶ್ (40), ಇವರ ಪುತ್ರ ತೇಜು(7) ಹಾಗೂ ಅಕ್ಕಪಕ್ಕದ ಮನೆಗಳ ಮಕ್ಕಳಾದ ಚೈತ್ರಾ (8), ಕವನ(11), ಅಭಿಷೇಕ್(6), ದೀಕ್ಷಾ(5), ನಿತಿನ್(8) ಅಸ್ವಸ್ಥರಾಗಿದ್ದಾರೆ. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಉತ್ತರಪ್ರದೇಶದಿಂದ ಆಲೆಮನೆ ಕೆಲಸಕ್ಕೆಂದು ಬಂದಿರುವ ಕಾರ್ಮಿಕರು ಕಾಚಳ್ಳಿ ಗಿಡದ ಹಣ್ಣು ತಿಂದಿದ್ದಾರೆ. ಆ ಬಳಿಕ ಜಗದೀಶ್ ಎಂಬವರಿಗೂ ತಿನ್ನಲು ಹೇಳಿದ್ದಾರೆ. ಅದರಂತೆ, ಜಗದೀಶ್ ತಾವೂ ತಿಂದು ಪುತ್ರನಿಗೂ ನೀಡಿದ್ದರಂತೆ. ಜತೆಗೆ, ಅಕ್ಕಪಕ್ಕದ ಮನೆಯ ಮಕ್ಕಳೂ ತಿಂದಿದ್ದಾರೆ. ಕೆಲ ಸಮಯದ ನಂತರ ಎಲ್ಲರಿಗೂ ರಕ್ತ ವಾಂತಿ, ಭೇದಿ ಕಾಣಿಸಿಕೊಂಡಿದೆ. ತೀರಾ ಅಸ್ವಸ್ಥಗೊಂಡಿದ್ದ 6 ಜನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು, ಸ್ವಲ್ಪ ಚೇತರಿಕೆ ಕಂಡಿದ್ದ ಇನ್ನುಳಿದವರಿಗೆ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ.
ಇದನ್ನೂ ಓದಿ: ಸಮುದ್ರದಲ್ಲಿ ಹುಟ್ಟುಹಬ್ಬದ ಸೆಲ್ಫಿ ತಂದ ದುರಂತ: ನಾಲ್ವರು ಯುವಕರು ನೀರುಪಾಲು