ಗಂಗಾವತಿ (ಕೊಪ್ಪಳ): ಕಾರಟಗಿ ತಾಲೂಕಿನ ಮೂಸ್ಟೂರು-ಕುಂಟೋಜಿ ವ್ಯಾಪ್ತಿಯಲ್ಲಿರುವ ಮೀಸಲು ಅರಣ್ಯದಲ್ಲಿ ಭೂಮಿ ಒತ್ತುವರಿ ಮಾಡಿಕೊಳ್ಳಲು ರಾತ್ರೋರಾತ್ರಿ ಕಾಡಿಗೆ ಬೆಂಕಿ ಹಚ್ಚಿ ವಿಕೃತಿ ಮೆರೆಯಲಾಗುತ್ತಿದೆ. ನಂತರ ಇದನ್ನು ಕಾಡ್ಗಿಚ್ಚು ಎಂಬಂತೆ ಬಿಂಬಿಸಲಾಗುತ್ತಿದೆ. ಈ ಬಗ್ಗೆ ಸಾಕಷ್ಟು ದೂರು ನೀಡಿದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ. ಅರಣ್ಯ ಉಳಿಸಿ ಎಂದು ಯುವಕನೊಬ್ಬ ಲೋಕಾಯುಕ್ತರಿಗೆ ದೂರು ಸಲ್ಲಿಸಿದ ಘಟನೆ ಇಂದು ಕಾರಟಗಿಯಲ್ಲಿ ನಡೆಯಿತು.
ಕಾರಟಗಿ ಪಟ್ಟಣದಲ್ಲಿ ಲೋಕಾಯುಕ್ತ ಡಿವೈಎಸ್ಪಿ ಸಲೀಂ ಪಾಷಾ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಅಹವಾಲು ಸ್ವೀಕಾರ ಸಭೆಯಲ್ಲಿ ಕುಂಟೋಜಿ ಗ್ರಾಮದ ಸುರೇಶ್ ಎಂಬ ಯುವಕ, ಈ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಿ ಅರಣ್ಯ ಉಳಿಸುವಂತೆ ಮನವಿ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಕಾಡ್ಗಿಚ್ಚಿನ ಬಗ್ಗೆ ಯುವಕ ಸುರೇಶ ಸವಿವರದೊಂದಿಗೆ ಬಂದು ದೂರು ಸಲ್ಲಿಸಿದರು. ಈ ಅರಣ್ಯದಲ್ಲಿ ಬೆಲೆ ಬಾಳುವ ಶ್ರೀಗಂಧ, ನೀಲಗಿರಿ ಸೇರಿದಂತೆ ಆಯುರ್ವೇದ ಗುಣವುಳ್ಳ ಹಲವು ಮರಗಳು ಈ ಕಾಡ್ಗಿಚ್ಚಿಗೆ ಬಲಿಯಾಗುತ್ತಿವೆ. ಜೊತೆಗೆ ಕಳ್ಳರು ಶ್ರೀಗಂಧ ಮರಗಳನ್ನು ಕಡಿದುಕೊಂಡು ಹೊಗುತ್ತಿದ್ದಾರೆ. ಈ ಬಗ್ಗೆ ಕಳೆದ ಒಂದೂವರೆ ವರ್ಷದಿಂದ ಸಂಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ಸಲ್ಲಿಸಿದರು, ಅರಣ್ಯ ಇಲಾಖೆಯವರು ಇಲ್ಲಿಯವರೆಗೆ ಕಾಡ್ಗಿಚ್ಚಿಗೆ ಅಥವಾ ಶ್ರೀಗಂಧ ಮರಗಳ್ಳರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಲೋಕಾಯುಕ್ತರು, ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ತೆಗೆದುಗೊಂಡ ಕ್ರಮದ ವಿವರಣೆ ನಮಗೂ ಮತ್ತು ದೂರುದಾರರಿಗೆ ನಿಗದಿತ ಅವಧಿಯೊಳಗೆ ರವಾನಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗೆ ಸೂಚಿಸಿದರು.
ಸಾಲ ಹಿಂತಿರುಗಿಸುವಂತೆ ವ್ಯಕ್ತಿಯಿಂದ ಕಿರುಕುಳ: ಬೂದಗುಂಪಾದಿಂದ ತಾಯಿಯೊಂದಿಗೆ ಬಂದಿದ್ದ ಯುವ ರೈತನೊಬ್ಬ, ಗ್ರಾಮದ ರಾಜಾಸಾಬ್ ಎನ್ನುವ ಖಾಸಗಿ ವ್ಯಕ್ತಿ ಟ್ರ್ಯಾಕ್ಟರ್ ಕೊಳ್ಳಲು ಸಾಲ ನೀಡಿದ್ದಾನೆ. ಸಾಲಕ್ಕೆ ಮೀಟರ್ ಬಡ್ಡಿ ಹಾಕುತ್ತಿದ್ದಾರೆ. ಆದಾಗ್ಯೂ ಆದಷ್ಟು ಬೇಗ ಸಾಲ ತಿರಿಸುವುದಾಗಿ ತಿಳಿಸಿದರೂ ಟ್ರ್ಯಾಕ್ಟರ್ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡರು.
ವ್ಯಕ್ತಿಯ ದೂರಿನ ಪ್ರತಿಗಳನ್ನು ಪರಿಶೀಲಿಸಿದ ಲೋಕಾಯುಕ್ತ ಡಿವೈಎಸ್ಪಿ ಸಲೀಂ ಪಾಷಾ, ಡಿವೈಎಸ್ಪಿ ರುದ್ರೇಶ್ ಉಜ್ಜಿನಿಕೊಪ್ಪಗೆ ನಿರ್ದೇಶನ ನೀಡುತ್ತೇನೆ. ದೂರು ದಾಖಲಿಸಿ ಎಂದರು.
ಕಡತ ಕಳೆದ ಸಿಬ್ಬಂದಿ: ಪುರಸಭೆಯಲ್ಲಿ ಫಾರಂ ನಂ.3 ನೀಡಲಾಗುತ್ತಿಲ್ಲ ಮತ್ತು ಮ್ಯುಟೇಶನ್ಗೆ ಕೊಟ್ಟು ಒಂದು ವರ್ಷವಾಯಿತು, ಆದರೆ ಈಗ ಫೈಲ್ ಕಳೆದಿದೆ ಎಂದು ಸತಾಯಿಸುತ್ತಿದ್ದಾರೆ ಎಂದು ಕಾರಟಗಿ ನಿವಾಸಿ ಮುರುಳಿ ಎನ್ನುವವರು ದೂರಿದರು. ಈ ಬಗ್ಗೆ ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ರೆಡ್ಡಿರಾಯನ ಗೌಡ ಪರ ಹಾಜರಾಗಿದ್ದ ಪುರಸಭೆ ಕಚೇರಿ ವ್ಯವಸ್ಥಾಪಕ ಹೆಚ್. ಪರಮೇಶ್ವರ್ ಸ್ಪಷ್ಟನೆ ನೀಡಿ, ನಮ್ಮಲ್ಲಿ ಗ್ರಾಮ ಠಾಣಾ ಹಾಗೂ ಹಕ್ಕು ಪತ್ರ ಇದ್ದ ಅರ್ಜಿಗಳಿಗೆ ಫಾರಂ. 3 ನೀಡಲಾಗುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ಟೌನ್ ಪ್ಲ್ಯಾನಿಂಗ್ ಆಗದಿರುವ ಕಾರಣಕ್ಕೆ ಫಾರಂ ನಂ. 3 ನೀಡಲಾಗುತ್ತಿಲ್ಲ. ಇವರ ಫೈಲ್ ಯಾವ ಮಾದರಿಯದ್ದು ಎನ್ನುವುದನ್ನು ಪರಿಶೀಲಿಸಿ ಸಮಸ್ಯೆ ಇತ್ಯರ್ಥಪಡಿಸಲಾಗುವುದು ಎಂದು ಭರವಸೆ ನೀಡಿದರು.
ಕೆರೆ ಒತ್ತುವರಿ ತೆರವುಗೊಳಿಸಿ: ಗುಂಡೂರು ಗ್ರಾಮಸ್ಥರಿಬ್ಬರು ತಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ ಇರುವ 2ಎಕರೆ 39 ಗುಂಟೆ ಸರ್ಕಾರಿ ಭೂಮಿಯಲ್ಲಿರುವ ಕೆರೆ ಪ್ರದೇಶ ಒತ್ತುವರಿಗೆ ಒಳಪಟ್ಟಿದೆ. ಇನ್ನು ಇಲ್ಲಿ ಕೆರೆ ಪುನರುಜ್ಜೀವನ ಕಾರ್ಯ ಕೈಗೊಂಡಿರುವ ಪಂಚಾಯತ್ ಇಲಾಖೆ ಕೇವಲ 30 ಗುಂಟೆಯಲ್ಲಿ ಕೆರೆ ನಿರ್ಮಾಣ ಮಾಡಿದೆ. ಆದರೆ ಇನ್ನುಳಿದ ಪ್ರದೇಶದಲ್ಲಿ ಕೆರೆ ಅಭಿವೃದ್ಧಿಪಡಿಸದೇ ಇರುವುದರಿಂದ ಒತ್ತುವರಿದಾರರಿಗೆ ಅನುಕೂಲ ಮಾಡಿಕೊಟ್ಟಂತಾಗಿದೆ. ಕೂಡಲೇ ಅಲ್ಲಿನ ಒತ್ತುವರಿ ತೆರವುಗೊಳಿಸಿ ಇಡೀ ಪ್ರದೇಶವನ್ನು ಕೆರೆ ಪ್ರದೇಶವನ್ನಾಗಿ ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿದರು.
ಈ ವೇಳೆ ಉಪಸ್ಥಿತರಿದ್ದ ಪಿಡಿಒ ಕನಕಪ್ಪ, ಸಮಸ್ಯೆಯ ಬಗ್ಗೆ ಸ್ಪಷ್ಟನೆ ನೀಡಿದರು. ಆಗ ಲೋಕಾಯುಕ್ತರು ಅರ್ಜಿದಾರರ ಮನವಿಯಂತೆ ಒತ್ತುವರಿ ತೆರವುಗೊಳಿಸುವಂತೆ ಸೂಚಿಸಿದಾಗ ತೆರವು ಮಾಡಿ ಕೆರೆ ವಿಸ್ತರಣೆಗೆ ಪ್ರಯತ್ನಿಸುವುದಾಗಿ ಸಭೆಗೆ ಭರವಸೆ ನೀಡಿದರು.
ಇದನ್ನೂ ಓದಿ: ಮೃತ ಮೀನುಗಾರರ ಕುಟುಂಬಕ್ಕೆ ತಕ್ಷಣ ಪರಿಹಾರ ನೀಡಿ: ಸಚಿವ ಮಂಕಾಳು ವೈದ್ಯ