ಕೊಪ್ಪಳ: ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದ ನೇರ ಸಂವಾದವನ್ನು ಕೃಷಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಬಿ.ಸಿ. ಪಾಟೀಲ್ ಅವರು ಕೊಪ್ಪಳದಲ್ಲಿ ವೀಕ್ಷಣೆ ಮಾಡಿದರು.
ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿರುವ ಆಡಿಟೋರಿಯಂ ಹಾಲ್‌ನಲ್ಲಿ ಸಚಿವ ಬಿ.ಸಿ. ಪಾಟೀಲ್, ಸಂಸದ ಸಂಗಣ್ಣ ಕರಡಿ, ಶಾಸಕ ಹಾಲಪ್ಪ ಆಚಾರ್ ಸೇರಿದಂತೆ ಅನೇಕ ಅಧಿಕಾರಿಗಳು ನೇರ ಸಂವಾದ ಕಾರ್ಯಕ್ರಮವನ್ನು ವೀಕ್ಷಣೆ ಮಾಡಿದರು. ಕಾರ್ಯಕ್ರಮ ವೀಕ್ಷಿಸಲು ವಿವಿಧ ಫಲಾನುಭವಿಗಳು ಸಹ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕುಷ್ಟಗಿ ತಾಲೂಕಿನ ಠಕ್ಕಳಕಿ ಗ್ರಾಮದ ಶಿವನಗೌಡ ಎಂಬುವವರು ಸಿಎಂ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ನೇರ ಸಂವಾದ ನಡೆಸಿ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದರು.
ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಸರ್ಕಾರ ಎಲ್ಲ ವರ್ಗದ ಜನರಿಗೆ ನೆರವು ನೀಡಿದೆ. ಉದ್ಯೋಗ ಖಾತ್ರಿ ಯೋಜನೆಯ ಮೂಲಕ ದುಡಿಯುವ ಜನರಿಗೆ ಕೆಲಸ ಒದಗಿಸಿ ಸರ್ಕಾರ ಅನುಕೂಲ ಮಾಡಿದೆ. ಕೂಲಿ ಹಣವು ಬ್ಯಾಂಕ್ ಖಾತೆಗೆ ಬಂದಿದೆ. ಮೈಕ್ರೋ ಎಟಿಎಂ ಮೂಲಕ ನಮಗೆ ನಮ್ಮ ಕೂಲಿ ಹಣ ಮನೆ ಬಾಗಿಲಿಗೆ ಬಂದಿದೆ. ಕೊರೊನಾ ಸಂಕಷ್ಟದ ಕಾಲದಲ್ಲಿ ಸರ್ಕಾರ ಜನತೆಯ ನೆರವಿಗೆ ಬಂದಿದೆ. ಹೀಗಾಗಿ ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದು ಶಿವನಗೌಡ ಅವರು ಸಿಎಂ ಅವರೊಂದಿಗೆ ನಡೆಸಿದ ನೇರ ಸಂವಾದದಲ್ಲಿ ಹೇಳಿದರು.