ಕೊಪ್ಪಳ : ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡುವಂತೆ ಆಗ್ರಹಿಸಿ ಕೂಲಿಕಾರ್ಮಿಕರು ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರ ಗ್ರಾಮ ಪಂಚಾಯಿತಿಗೆ ನೂರಾರು ಕೂಲಿಕಾರ್ಮಿಕರು ಗುದ್ದಲಿ, ಸನಿಕೆ ಹಾಗೂ ಬುಟ್ಟಿಗಳೊಂದಿಗೆ ಬಂದು ಮುತ್ತಿಗೆ ಹಾಕಿದರು. ಮಳೆ ಬೆಳೆ ಇಲ್ಲದೆ ಜನರು ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಕೂಲಿಕಾರರಿಗೆ ಗ್ರಾಮ ಪಂಚಾಯಿತಿ ಕೂಲಿ ಕೆಲಸ ನೀಡುತ್ತಿಲ್ಲ. ಕೂಲಿ ಕೆಲಸ ನೀಡುವಂತೆ ಸಾಕಷ್ಟು ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಕೇಳಿಕೊಂಡರೂ ಕೂಲಿಕಾರರಿಗೆ ಕೆಲಸ ನೀಡಿಲ್ಲ ಎಂದು ಕೂಲಿಕಾರರು ಆಕ್ರೋಶ ವ್ಯಕ್ತಪಡಿಸಿದರು.
ನೂರಾರು ಕೂಲಿಕಾರ್ಮಿಕರು ಏಕಕಾಲದಲ್ಲಿ ಬಂದು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಇವರನ್ನು ನಿಯಂತ್ರಿಸಲು ಪೊಲೀಸರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಹರಸಾಹಸಪಟ್ಟರು. ಸ್ಥಳಕ್ಕಾಗಮಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ ಭೀಮಣ್ಣ ಕೂಲಿಕಾರರನ್ನು ಸಮಾಧಾನಪಡಿಸಲು ಮುಂದಾದರಾದರೂ ಕೂಲಿಕಾರರು ಮಾತ್ರ ಖಾತ್ರಿ ಯೋಜನೆಯಲ್ಲಿ ಕೂಲಿ ಕೆಲಸ ನೀಡುವವರೆಗೂ ನಾವು ಇಲ್ಲಿಂದ ಕದುಲುವುದಿಲ್ಲ ಎಂದು ಬಿಗಿಪಟ್ಟು ಹಿಡಿದು ಪಂಚಾಯಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.