ಗಂಗಾವತಿ: ಉಳಿತಾಯ ಖಾತೆಯ ಹಣ ಸಕಾಲಕ್ಕೆ ನೀಡದಿದ್ದರಿಂದ ಬೇಸತ್ತ ವಿವಿಧ ಸ್ವಸಹಾಯ ಗುಂಪಿನ ಸದಸ್ಯರು ಪ್ರಾಥಮಿಕ ಕೃಷಿ ಮತ್ತು ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಆಡಳಿತ ಮಂಡಳಿಯನ್ನು ಹಿಗ್ಗಾಮುಗ್ಗ ಜಾಡಿಸಿದ ಘಟನೆ ನಗರದಲ್ಲಿ ನಡೆದಿದೆ.
ತಾಲೂಕಿನ ಶ್ರೀರಾಮನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನು ಗ್ರಾಮದ ಶ್ರೀರಾಮ ಮಂದಿರದ ಆವರಣದಲ್ಲಿ ಅಧ್ಯಕ್ಷ ಜಿ. ರಾಮಕೃಷ್ಣ ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಸಭೆಗೆ ಏಕಾಏಕಿ ನುಗ್ಗಿದ್ದ ಗುಂಪಿನ ಸದಸ್ಯರು ಉಳಿತಾಯ ಖಾತೆಯಲ್ಲಿರುವ ನಮ್ಮ ಹಣ ವಾಪಾಸ್ ಬೇಕು, ಸಕಾಲಕ್ಕೆ ನೆರವಿಗೆ ಬಾರದ ಹಣ ನಿಮ್ಮ ಬ್ಯಾಂಕಲ್ಲಿ ಇದ್ದರೆಷ್ಟು ಬಿಟ್ಟರೆಷ್ಟು ಹಣ ವಾಪಾಸ್ ಕೊಡಿ ಎಂದು ಪಟ್ಟು ಹಿಡಿದರು.
ಇದೇ ಸಮಯ ಕಾಯುತ್ತಿದ್ದ ಕೆಲ ಸದಸ್ಯರು ತಮ್ಮ ಖಾತೆಯಿಂದ ಹಣ ಅನುಮತಿಯಿಲ್ಲದೇ ತೆಗೆಯಲಾಗಿದೆ, ಸಾಲಮನ್ನಾ ಆಗಿಲ್ಲ, ಸಾಲ ತೀರಿಸಿದರೂ ಮತ್ತೆ ಸಾಲ ಇರುವುದಾಗಿ ನೋಟಿಸ್ ನೀಡಲಾಗಿದೆ ಎಂಬ ಆರೋಪಗಳ ಸುರಿಮಳೆಗೈಯ್ದರು. ಅಲ್ಲದೆ ಈ ಹಿಂದೆ ಸಹಕಾರ ಸಂಘದ ಮೇಲೆ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಆರೋಪಗಳು ಕೂಡಾ ಕೇಳಿ ಬಂದಿವೆ. ಇನ್ನು ಗಲಾಟೆ ನಿಯಂತ್ರಿಸಲು ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಜನರ ರೋಷಾವೇಶ ನೋಡಿ ಮೂಕ ಪ್ರೇಕ್ಷರಾಗಿದ್ದರು.