ಗಂಗಾವತಿ (ಕೊಪ್ಪಳ): ವೈಕುಂಠ ಏಕಾದಶಿಯಂದು ಸ್ವರ್ಗದ ಬಾಗಿಲಿನ ಮೂಲಕ ವಿಷ್ಣು ಭಕ್ತರಿಗೆ ದರ್ಶನ ಭಾಗ್ಯ ಕಲ್ಪಿಸುತ್ತಾನೆ ಎಂಬ ಧಾರ್ಮಿಕ ನಂಬಿಕೆ ಇದೆ. ಇದಕ್ಕಾಗಿ ಭಕ್ತರು ಹರಸಾಹಸ ಪಟ್ಟು ಸಮೀಪದ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಹರಕೆ, ಪ್ರಾರ್ಥನೆ ಸಲ್ಲಿಸುತ್ತಾರೆ.
ಇದರ ಭಾಗವಾಗಿ ಎರಡನೇ ತಿರುಪತಿ ಎಂದು ಕರೆಯಲಾಗುವ ತಾಲೂಕಿನ ವೆಂಕಟಗಿರಿಯ ವೆಂಕಟೇಶ್ವರ ದೇಗುಲದಲ್ಲಿ ನಡೆಯುವ ಲಕ್ಷ ತುಳಸಿ ಅರ್ಚನೆಗಾಗಿ ಚಿಕ್ಕಬೆಣಕಲ್ ಹಾಗೂ ಹಿರೇಬೆಣಕಲ್ ಗ್ರಾಮದ ಹತ್ತಾರು ಮಹಿಳೆಯರು ಅಹೋರಾತ್ರಿ ಶ್ರಮಿಸಿ ತುಳಸಿ ದಳಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ವೈಕುಂಠ ಏಕಾದಶಿಯಂದು (ಡಿ.25) ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ವೆಂಕಟೇಶ್ವರನ ವಿಗ್ರಹ ಅಲಂಕಾರಗೊಳ್ಳಲಿರುವ ಕಾರಣ ಒಂದು ಲಕ್ಷ ರಾಮತುಳಸಿ ಹಾಗೂ ಮಾರನೇ ದಿನದ ವಿಶೇಷ ಅಲಂಕಾರಕ್ಕೆ ಮತ್ತೊಂದು ಲಕ್ಷ ಕೃಷ್ಣತುಳಸಿ ದಳಗಳ ಅಗತ್ಯವಿದೆ.
ಹೀಗಾಗಿ ದಾಸನಾಳದ ಸಮೀಪ ಇರುವ ಯಂಕಪ್ಪ ಕಟ್ಟಿಮನಿ ಎಂಬುವವರ ಹೊಲದಲ್ಲಿ ಬೆಳೆದ ತುಳಸಿ ತೋಟದಲ್ಲಿ ದಳಗಳನ್ನು ಕೀಳುವ ಕಾರ್ಯದಲ್ಲಿ ಹತ್ತಾರು ಮಹಿಳೆಯರು ಉಚಿತ ಸೇವೆ ಮಾಡುತ್ತಿದ್ದಾರೆ. ತೋಟದ ಮಾಲಿಕ ಉಚಿತವಾಗಿ ಧಾರ್ಮಿಕ ಕಾರ್ಯಕ್ಕೆ ತುಳಸಿ ನೀಡುತ್ತಿದ್ದಾರೆ.