ಕೊಪ್ಪಳ: ಸಮಾಜದ ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸುವ ಶಕ್ತಿ ಮಹಿಳೆಯರಿಗೆ ಮತ್ತು ಮಠಗಳಿಗೆ ಇದೆ ಎಂದು ಮಾಜಿ ಸಂಸದ ಹಾಗೂ ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ಹೇಳಿದರು.
ಜಿಲ್ಲೆಯ ಕುಷ್ಟಗಿ ತಾಲೂಕಿನ ಚಳಗೇರಿ ಗ್ರಾಮದ ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳ ಮಠದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಸಮಾಜದಲ್ಲಿರುವ ಎಲ್ಲಾ ಮಠಗಳು ಒಂದೆ ರೀತಿಯಲ್ಲಿವೆ ಎಂದು ಹೇಳುವುದಿಲ್ಲ. ಚಳಗೇರಿಯ ಸ್ವಾಮಿಗಳನ್ನು ನಡೆದಾಡುವ ದೇವರೆಂದು ಈ ಭಾಗದ ಜನರು ಕರೆಯುತ್ತಿದ್ದಾರೆ ಎಂದು ಕೇಳಿದ್ದೇನೆ. ನಿಜವಾದ ಅರಿಷಡ್ವರ್ಗಗಳನ್ನು ಜಯಿಸಿರುವ ಸ್ವಾಮೀಜಿಗಳು, ಅನೇಕ ಮಠಗಳು ಸಮಾಜಮುಖಿಯಾಗಿ ಕೆಲಸ ಮಾಡುತ್ತಿವೆ. ಸಾಮೂಹಿಕ ವಿವಾಹ, ಕೋಟಿ ದೀಪೋತ್ಸವ ಸೇರಿದಂತೆ ಅನೇಕ ಉತ್ತಮ ಕೆಲಸ ಮಾಡುತ್ತಿರುವ ಈ ಮಠದ ಕೆಲಸ ನಿಜಕ್ಕೂ ಶ್ಲಾಘನೀಯ ಎಂದು ಬಣ್ಣಿಸಿದರು. ಇದೇ ವೇಳೆ ಅವರು, ಮನೆಯನ್ನು ನಡೆಸುವ ಸಾಮರ್ಥ್ಯವಿರುವ ತಾಯಿ, ಸಮಾಜವನ್ನು ಮುನ್ನಡೆಸುತ್ತಾಳೆ ಎಂದರು.
ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಎಲ್ಲಾ ಬಡವರಿಗೆ 7 ಕೆಜಿ ಅಕ್ಕಿಯನ್ನು ಕೊಡುವ ಕಾರ್ಯಕ್ರಮದ ಮೂಲಕ ಹಸಿವು ಮುಕ್ತ ರಾಜ್ಯವನ್ನಾಗಿ ಮಾಡಿದ್ದಾರೆ. ಸಮಾಜದಲ್ಲಿರುವ ತಾಯಂದಿರ ಬವಣೆಯನ್ನು ಅರ್ಥಮಾಡಿಕೊಂಡು ಸಿದ್ದರಾಮಯ್ಯ ಈ ಕಾರ್ಯಕ್ರಮ ಜಾರಿಗೆ ತಂದರು. ವಿಶ್ವದ ಮನುಕುಲವನ್ನು ಹಸಿವು ಮುಕ್ತ ಮಾಡುವುದು 21 ನೇ ಶತಮಾನದ ಅನಿವಾರ್ಯತೆಯಾಗಿದೆ. ದೇಶವನ್ನು ಹಸಿವು ಮುಕ್ತ ಮಾಡಲು ಮಠಮಾನ್ಯಗಳ ಮಾರ್ಗದರ್ಶನ ಅವಶ್ಯಕತೆ ಇದೆ ಎಂದು ಹೇಳಿದರು.