ಕುಷ್ಟಗಿ : ಲಾಕ್ಡೌನ್ ಎಫೆಕ್ಟ್ ಇದೀಗ ನೇಕಾರರ ಮೇಲೂ ಬಿದ್ದಿದೆ. ಹಲವು ಇಲ್ಲಗಳ ನಡುವೆ ಸಿಲುಕಿರುವ ಪರಿಣಾಮ ಜೀವನ ನಿರ್ವಹಣೆ ಕಷ್ಟಕರವಾಗಿದೆ.
ಲಾಕ್ಡೌನ್ ವೇಳೆ ಒಂದು ವಸ್ತು ಸಿಕ್ಕರೆ ಮತ್ತೊಂದು ವಸ್ತುವಿಗಾಗಿ ಪರದಾಟ ನಡೆಸಬೇಕಾಗಿದೆ. ಒಂದು ವಸ್ತು ಇಲ್ಲದಿದ್ದರೆ ನೇಕಾರಿಕೆ ನಡೆಯೋದೆ ಇಲ್ಲ ಎನ್ನುವಾಗ ಇದೀಗ ಹಲವು ಇಲ್ಲಗಳ ಮದ್ಯೆ ನೇಕಾರಿಕೆ ನಂಬಿದ ಕುಟುಂಬಗಳಿವೆ. ಸಿಎಂ ಯಡಿಯೂರಪ್ಪರವರು ಮುಖ್ಯಮಂತ್ರಿಯಾದ ವೇಳೆ ರೈತ ಮತ್ತು ನೇಕಾರರು ನನ್ನ ಎರಡು ಕಣ್ಣುಗಳಿದ್ದಂತೆ ಅಂತಾ ಹೇಳಿದ್ದರು. ಇಂದಲ್ಲ ನಾಳೆ ಸರ್ಕಾರ ಕಣ್ತೆರೆಯುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದ ನೇಕಾರರಿಗೆ ನಲವತ್ತು ದಿನ ಕಳೆದರೂ ಯಾವುದೇ ಸವಲತ್ತುಗಳಿಲ್ಲದೆ ಸಂಕಷ್ಟಕ್ಕೀಡಾಗಿದ್ದಾರೆ.
ಸರ್ಕಾರ ರೈತರಿಗೆ ಹಾಗೂ ಕಾರ್ಮಿಕರಿಗೆ ₹2,000ನಂತೆ ಮೂರು ಕಂತುಗಳಲ್ಲಿ ಸಹಾಯಧನ ನೀಡುತ್ತಿದೆ. ಆದರೆ, ಈ ಸಹಾಯಧನ ನೇಕಾರರಿಗೆ ಅನ್ವಯವಾಗುವುದಿಲ್ಲವೇ? ಎನ್ನುವುದು ನೇಕಾರರ ಪ್ರಶ್ನೆ. ಇನ್ನೂ ಲಾಕ್ಡೌನ್ ಆದ ಮೇಲೆ ಕಚ್ಚಾನೂಲು, ಬಣ್ಣ ಎಲ್ಲವೂ ಸ್ಥಗಿತಗೊಂಡಿದೆ ಎನ್ನುವುದು ನೇಕಾರಿಕೆ ಗ್ರಾಮ ಕುಷ್ಟಗಿ ತಾಲೂಕಿನ ದೋಟಿಹಾಳ ನೇಕಾರರ ಅಳಲಾಗಿದೆ.
ದೋಟಿಹಾಳ ಕೈಮಗ್ಗ ನೇಕಾರರ ಸಂಘದ ನಿರ್ದೇಶಕ ಶ್ರೀಧರ ಸಕ್ರಿ ಮಾತನಾಡಿ, ದೇಶವ್ಯಾಪಿ ಕೊರೊನಾದಿಂದಾಗಿ ಲಾಕ್ಡೌನ್ ಆಗಿದ್ದು ನೇಕಾರಿಕೆ ಕುಟುಂಬಗಳು ಹೊರತಲ್ಲ. ಆದರೆ, ತೀರಾ ಸಂಕಷ್ಟದ ಪರಸ್ಥಿತಿಯಲ್ಲಿರುವ ನಮಗೆ ಸರ್ಕಾರ ನೆರವಾಗಬೇಕಿದೆ ಎಂದರು.