ಕುಷ್ಟಗಿ(ಕೊಪ್ಪಳ): ಇಲ್ಲಿನ ಸ್ಥಳೀಯ ಮಾರುಕಟ್ಟೆಯಲ್ಲಿ ಕಾಯಿಪಲ್ಲೆ ಖರೀದಿ ಮಾಡುವವರು ಇಲ್ಲದೆ ಮಾರಾಟಗಾರರು ತೀವ್ರ ಸಂಕಷ್ಟ ಎದುರಿಸಬೇಕಾಗಿದೆ. ಪ್ರತಿ ವರ್ಷ ಈ ವೇಳೆ ಕಾಯಿಪಲ್ಲೆ ಬೆಲೆ ಗಗನಕ್ಕೇರಿರುತ್ತಿತ್ತು. ಆದರೆ ಲಾಕ್ಡೌನ್ನಿಂದಾಗಿ ಕಾಯಿಪಲ್ಲೆಯನ್ನು ಕೇಳೋರು ಗತಿಯಿಲ್ಲದಂತಾಗಿದೆ.
ಲಾಕಡೌನ್ ಸಡಿಲಿಕೆಯಲ್ಲೂ ರೈತರು ಬೆಳೆದ ತರಕಾರಿಗೆ ಬೆಲೆ ಇಲ್ಲದೇ ಕೊಳೆಯುವ ಸ್ಥಿತಿಗೆ ತಲುಪಿದೆ. ರೈತರ ಬೆಳೆದ ಉತ್ಪನ್ನವನ್ನು ಮಾರುಕಟ್ಟೆಗೆ ತಂದರೂ ಬೆಲೆ ಇಲ್ಲದಂತಾಗಿದ್ದು, ಬದನೆ, ಈರುಳ್ಳಿ, ಹಸಿ ಮೆಣಸಿಕಾಯಿ ಕನಿಷ್ಠ ಬೆಲೆಗೆ ಇಳಿಮುಖವಾಗಿವೆ.
ಮಾರುಕಟ್ಟೆಯಲ್ಲಿ 250 ಗ್ರಾಂ ಬೆಲೆ ಕೆಜಿ ಮೌಲ್ಯಕ್ಕೆ ಸಮವಾಗಿದೆ. ದಿನ ಬೆಳಗಾದರೆ ದಿನದಿಂದ ದಿನಕ್ಕೆ ಬೆಲೆಯೂ ಕುಸಿಯುತ್ತಿದ್ದು, ಲಾಕಡೌನ್ ಸಡಿಲಿಕೆಯಿಂದ ಹೆಚ್ಚಿನ ಬೆಲೆಗೆ ತಮ್ಮ ಉತ್ಪನ್ನ ಮಾರಾಟವಾಗುತ್ತದೆ ಎಂದು ಬರುವ ರೈತರಿಗೆ ಮತ್ತೆ ನಿರಾಸೆಯಾಗುತ್ತಿದೆ.