ಕುಷ್ಟಗಿ (ಕೊಪ್ಪಳ): ಕಂಟೈನರ್ ಚಾಲಕನ ನಿರ್ಲಕ್ಷ್ಯ ಹಾಗೂ ಅಮಾನವೀಯ ವರ್ತನೆಗೆ ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಈ ಮೂಲಕ ಇಬ್ಬರು ಮಕ್ಕಳು ಅನಾಥರಾದರು.
ತಮ್ಮ ತಂದೆಯ ಪಾರ್ಥೀವ ಶರೀರವನ್ನು ತಮ್ಮ ರಾಜ್ಯಕ್ಕೆ ಕರೆದೊಯ್ಯಲು ಪರದಾಡಿದ ಸಂದರ್ಭದಲ್ಲಿ ಪೊಲೀಸರು, ಸ್ಥಳೀಯ ಮುಸ್ಲಿಂ ಮುಖಂಡರು ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಉತ್ತರ ಪ್ರದೇಶದ ಮೂಲದ ಕಲ್ಲಾ ಅಬ್ದುಲ್ ಹಬೀಜ್ ಅವರು ತಮ್ಮ ಮಕ್ಕಳಾದ ಶಾರುಖ್, ಯಾಕೂಬ್ ಅವರೊಂದಿಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ವಾಸವಾಗಿದ್ದರು. ತಮ್ಮ ರಾಜ್ಯಕ್ಕೆ ತೆರಳಲು ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸಿದ್ದರು. ಅದರಂತೆ ಬೆಂಗಳೂರು ರೈಲ್ವೆ ನಿಲ್ದಾಣಕ್ಕೆ ಬಂದಿದ್ದರು.
ಉತ್ತರ ಪ್ರದೇಶಕ್ಕೆ ಹೊರಡುವ ರೈಲಿನ ಕುರಿತು ಸಮರ್ಪಕ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ತುಮಕೂರುವರೆಗೂ ಕಾಲ್ನಡಿಗೆ ಮುಖಾಂತರ ಬಂದಿದ್ದರು. ಅಲ್ಲಿ ಕಂಟೈನರ್ ಚಾಲಕ ಉತ್ತರ ಪ್ರದೇಶ ತಲುಪಿಸುವುದಾಗಿ ತಲಾ ₹ 2 ಸಾವಿರ ಪಡೆದು ಹತ್ತಿಸಿಕೊಂಡಿದ್ದಾನೆ. ಕಂಟೈನರ್ನಲ್ಲಿ ಕಬ್ಬಿಣದ ರಾಡ್ಗಳಿದ್ದವು. ಇದರಲ್ಲಿ 10 ಪ್ರಯಾಣಿಕರ ಜೊತೆಗೆ ಈ ಮೂವರನ್ನು ಹತ್ತಿಸಿಕೊಂಡಿದ್ದ.
ಕುಷ್ಟಗಿ ಹೆದ್ದಾರಿ ಟ್ಲೋಲ್ ಪ್ಲಾಜಾ (ಕೆ.ಬೋದೂರು) ಬಳಿ, ಹಂಪ್ಸ್ಗೆ ಕಬ್ಬಿಣದ ರಾಡ್ಗಳು, ಕಲ್ಲಾ ಅಬ್ದುಲ್ ಮೇಲೆ ಬಿದ್ದಿದೆ. ಆಗ ಅವರು ತೀವ್ರ ಗಾಯಗೊಂಡಿದ್ದಾರೆ. ಆತನ ಮಕ್ಕಳಿಬ್ಬರಿಗೂ ಗಾಯವಾಗಿದೆ. ಆದರೂ, ಕಂಟೈನರ್ ನಿಲ್ಲಿಸದೇ ಚಾಲಕ ಹಾಗೆ ಚಲಾಯಿಸಿದ್ದ. ಗಾಯಾಳುಗಳ ಆಕ್ರಂದನ ರಂಪಾಟಕ್ಕೆ ಚಾಲಕ ಮೂವರನ್ನು ಮಾರ್ಗ ಮಧ್ಯೆ ಇಳಿಸಿ ಹೋಗಿದ್ದಾನೆ. ಕುಷ್ಟಗಿ ಪೊಲೀಸರಿಗೆ ಮಾಹಿತಿ ತಿಳಿಯುತ್ತಿದ್ದಂತೆ, ಮೂವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರಗೆ ದಾಖಲಿಸಿದರು. ಆದರೆ, ಚಿಕಿತ್ಸೆ ಫಲಿಸದೇ ಮಕ್ಕಳಿಬ್ಬರ ತಂದೆ ಕೊನೆಯುಸಿರೆಳೆದಿದ್ದಾರೆ.
ಪೊಲೀಸರು, ಸ್ಥಳೀಯ ಮುಸ್ಲಿಂ ಮುಖಂಡರು ಇಲ್ಲಿಯೇ ಧಪನ್ (ಅಂತ್ಯಕ್ರಿಯೆ) ಮಾಡುವಂತೆ ಸಲಹೆ ನೀಡಿದರು. ಅದಕ್ಕೆ ಒಪ್ಪದ ಮಕ್ಕಳಿಬ್ಬರು, ತಂದೆಯ ಮೃತದೇಹವನ್ನು ಎಷ್ಟೇ ಖರ್ಚಾಗಲಿ ತಮ್ಮೂರಿಗೆ ಕರೆದೊಯ್ಯುದಾಗಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಬಾಗಲಕೋಟೆಯಿಂದ ಫ್ರೀಜರ್ ಆ್ಯಂಬ್ಯುಲೆನ್ಸ್ ಕರೆಯಿಸಿ ಉತ್ತರ ಪ್ರದೇಶಕ್ಕೆ ಕಳುಹಿಸಿಕೊಡಲಾಯಿತು. ಕಂಟೈನರ್ ಚಾಲಕನ ವಿರುದ್ಧ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.