ಗಂಗಾವತಿ(ಕೊಪ್ಪಳ): ರಾಮಾಯಣ ಕಾಲದ ಕಿಷ್ಕಿಂಧೆಯಾದ ಅಂಜನಾದ್ರಿಯಲ್ಲಿ ಮುಂದಿನ ಆಗಸ್ಟ್ ತಿಂಗಳಲ್ಲಿ ನಡೆಯುವ ವಿಶ್ವ ಸಾಧು-ಸಂತ ಮೇಳಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಆಹ್ವಾನ ನೀಡಲಾಗಿದೆ. ಅಂಜನಾದ್ರಿಯ ಪ್ರಧಾನ ಅರ್ಚಕ ಮಹಾಂತ ವಿದ್ಯಾದಾಸ ಬಾಬಾ ನೇತೃತ್ವದ ತಂಡ ಯೋಗಿ ಆದಿತ್ಯನಾಥ ಸೇರಿದಂತೆ ಉತ್ತರ ಪ್ರದೇಶದ ರಾಜಕೀಯ ನೇತಾರರು, ಧಾರ್ಮಿಕ ಮುಖಂಡರನ್ನು ಆಹ್ವಾನಿಸಿದೆ.
ಈಗಾಗಲೇ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಎಐಸಿಸಿಯ ಪ್ರಮೋದ್ ತಿವಾರಿ, ಆರಾಧನ ಮಿಶ್ರಮೋಹನ್ ಸೇರಿ ಪ್ರಮುಖರನ್ನು ಸಮ್ಮೇಳನಕ್ಕೆ ಆಹ್ವಾನಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿದ್ಯಾದಾಸ ಬಾಬಾ, ವಿಶ್ವದ ಸಮಸ್ತ ಸಾಧು-ಸಂತರನ್ನು ಪವಿತ್ರ ಭೂಮಿ ಅಂಜನಾದ್ರಿಯಲ್ಲಿ ಸೇರಿಸಿ ಸನಾತನ ಹಿಂದೂ ಧರ್ಮದ ಸಾಧಕ, ಬಾಧಕಗಳ ಕುರಿತು ಚಿಂತನ-ಮಂಥನ ಜರುಗಲಿದೆ. ಈಗಾಗಲೇ ಹನುಮ ಭಕ್ತರು ಪೂರ್ವ ಸಿದ್ಧತೆಯಲ್ಲಿದ್ದು ಕ್ಷೇತ್ರದಲ್ಲಿ ಮೂಲಸೌಕರ್ಯಗಳ ಕುರಿತ ಸರ್ಕಾರ-ಜಿಲ್ಲಾಡಳಿತದ ಜತೆಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಕರ್ನಾಟಕ, ಉತ್ತರಪ್ರದೇಶ, ಗುಜರಾತ್ ಸೇರಿದಂತೆ ನಾನಾ ರಾಜ್ಯದ ಮುಖ್ಯಮಂತ್ರಿಗಳು, ಕೇಂದ್ರದ ಸಚಿವರು ವಿಶ್ವ ಸಾಧು-ಸಂತರ ಮೇಳಕ್ಕೆ ಆಗಮಿಸಲಿದ್ದಾರೆ ಎಂದು ಬಾಬಾ ತಿಳಿಸಿದ್ದಾರೆ.
ಇದನ್ನೂ ಓದಿ: ಹಾವೇರಿ ಜಿಲ್ಲಾಡಳಿತದಿಂದ ಬಸವೇಶ್ವರ ಜಯಂತಿ ಆಚರಣೆ