ಕುಷ್ಟಗಿ /ಕೊಪ್ಪಳ: ದಿನದಿಂದ ದಿನಕ್ಕೆ ಮತ್ತೆ ಹೊಸ ಕೊರೊನಾ ಸೋಂಕಿತ ಪ್ರಕರಣಗಳು ಕಂಡುಬರುತ್ತಿದ್ದು, ಇದೀಗ ಕುಷ್ಟಗಿ ತಾಲೂಕಿನಲ್ಲಿ ಮತ್ತೆ 2 ಕೋವಿಡ್-19 ಕೇಸ್ಗಳು ದೃಢಪಟ್ಟಿವೆ.
ತಾಲೂಕಿನ ತಾವರಗೇರಾದ 59 ವಯಸ್ಸಿನ ಮಹಿಳೆ ಹಾಗೂ ಗರ್ಜನಾಳ ಗ್ರಾಮದ ಯುವಕನಿಗೆ ಕೋವಿಡ್ ಸೋಂಕು ತಗುಲಿದ್ದು, ಹೋಂ ಐಸೋಲೇಶನ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಾಲೂಕಾ ವೈದ್ಯಾಧಿಕಾರಿ ಡಾ. ಆನಂದ ಗೋಟೂರು ತಿಳಿಸಿದ್ದಾರೆ. ಈ ಮೂಲಕ ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 6ಕ್ಕೇರಿದೆ.
ಬೆಳದಿಂಗಳ ಬುತ್ತಿ ಜಾತ್ರೆ ರದ್ದು:
ಇನ್ನು ಈ ಭಾಗದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ತಾಲೂಕಿನ ತಳವಗೇರಾ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ಮಾ.29 ರಂದು ನಿಗದಿಯಾಗಿದ್ದ ಬೆಳದಿಂಗಳ ಬುತ್ತಿ ಜಾತ್ರೆಯನ್ನು (ವನ ಭೋಜನಾ) ಕೊರೊನಾ 2ನೇ ಅಲೆ ಹಿನ್ನೆಲೆಯಲ್ಲಿ ಮೊಟಕುಗೊಳಿಸಲು ಶ್ರೀ ಶರಣಬಸವೇಶ್ವರ ದೇವಸ್ಥಾನ ಸಮಿತಿ ನಿರ್ಧರಿಸಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಶ್ರೀ ಶರಣಬಸವೇಶ್ವರ ಜಾತ್ರೋತ್ಸವ ಹಿನ್ನೆಲೆಯಲ್ಲಿ ಮಾ.29ರ ರಾತ್ರಿ ಹೈಸ್ಕೂಲ್ ಮೈದಾನದಲ್ಲಿ ಬೆಳದಿಂಗಳ ಜಾತ್ರೆ, ಏಪ್ರಿಲ್ 3 ರಂದು ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ರಥೋತ್ಸವ ನಿಗದಿಯಾಗಿತ್ತು. ಆದರೆ ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಆಚರಣೆಯನ್ನು ಸಾಂಕೇತಿಕವಾಗಿ ಆಚರಿಸುವ ತೀರ್ಮಾನ ಕೈಗೊಂಡಿದ್ದು, ಬುತ್ತಿ ಜಾತ್ರೆಯನ್ನು ಮೊಟಕುಗೊಳಿಸುವ ತೀರ್ಮಾನಕ್ಕೆ ಬರಲಾಗಿದೆ.