ಕೊಪ್ಪಳ: ಜಿಲ್ಲೆಯಲ್ಲಿನ ತುಂಗಭದ್ರಾ ಎಡದಂಡೆ ನಾಲೆಯ 100 ಮೀಟರ್ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ತುಂಗಭದ್ರಾ ಎಡದಂಡೆ ನಾಲೆಗೆ ಏಪ್ರಿಲ್ 11 ರಿಂದ ಏಪ್ರಿಲ್ 20 ರವರೆಗೆ ಜನ ಜಾನುವಾರುಗಳಿಗೆ ಕುಡಿಯುವ ಸುಮಾರು 2 ಟಿಎಂಸಿ ನೀರನ್ನು ಹರಿಸಬೇಕಾಗಿರುವ ಹಿನ್ನೆಲೆಯಲ್ಲಿ ನೀರು ನಿರ್ವಹಣೆಯ ಉದ್ದೇಶದಿಂದ ನಾಲೆಯ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸುವಂತೆ ಕಲುಬುರಗಿ ವಿಭಾಗದ ಪ್ರದೇಶಿಕ ಆಯುಕ್ತರ ಸೂಚನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ನಿಷೇಧಾಜ್ಞೆ ಹೊರಡಿಸಿದ್ದಾರೆ.
ಜಿಲ್ಲೆಯಲ್ಲಿನ ತುಂಗಭದ್ರಾ ಎಡದಂಡೆ ನಾಲೆ 0 ಮೈಲ್‍ನಿಂದ 47 ನೇ ಮೈಲ್ ವರೆಗೆ ಎಡ ಮತ್ತು ಬಲ ದಡಗಳ ಸುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದಾರೆ. ನಿಷೇಧಾಜ್ಞೆಯನ್ವಯ ತುಂಗಭದ್ರಾ ಎಡದಂಡೆ ನಾಲೆಯ ಮೇಲ್ಕಾಣಿಸಿದ ಪ್ರದೇಶದ 100 ಮೀಟರ್ ಅಂತರದಲ್ಲಿ ಇಬ್ಬರಿಗಿಂತ ಹೆಚ್ಚು ಜನರು ಒಡಾಡುವಂತಿಲ್ಲ, ಹಾಗೂ ಮಾರಕಾಸ್ತ್ರ ಹಿಡಿದು ಓಡಾಡುವಂತಿಲ್ಲ. ಈ ಆದೇಶವು ಮದುವೆ ಮತ್ತು ಶವ ಸಂಸ್ಕಾರ ಹಾಗೂ ಇನ್ನಿತರೆ ಧಾರ್ಮಿಕ ಕಾರ್ಯಕ್ರಮಗಳಿಗೆ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ.