ಕೊಪ್ಪಳ: ತಾಲೂಕಿನ ಮುನಿರಾಬಾದ್ ಬಳಿಯ ತುಂಗಭದ್ರಾ ಜಲಾಶಯದ ಎಡದಂಡೆ ಮೇಲ್ಮಟ್ಟದ ಗೇಟ್ ದುರಸ್ತಿ ಕಾರ್ಯ ನಾಲ್ಕನೇ ದಿನವೂ ಕೂಡ ಮುಂದುವರೆದಿದೆ.
ಕಳೆದ ಮೂರು ದಿನಗಳ ಹಿಂದೆ ಮೇಲ್ಮಟ್ಟದ ನಾಲೆಯ ಗೇಟ್ ಕಿತ್ತು ಹೋಗಿದ್ದರಿಂದ ಅಪಾರ ಪ್ರಮಾಣದ ನೀರು ಮುನಿರಾಬಾದ್ನ ಹಲವು ಪ್ರದೇಶಕ್ಕೆ ನುಗ್ಗಿತ್ತು. ಇಂದೂ ಸಹ ನೀರು ನುಗ್ಗಿದೆ.
ಇನ್ನು ಕಿತ್ತು ಹೋಗಿರುವ ಗೇಟ್ ಅಥವಾ ನಾಲೆಯ ಬಾಯಿ ಬಂದ್ ಮಾಡುವ ಕಾರ್ಯ ಕಳೆದ ಮೂರು ದಿನದಿಂದ ನಡೆಯುತ್ತಿದೆ. ಆದರೆ, ಎಂಜಿನಿಯರ್ಗಳು ಮಾಡುತ್ತಿರುವ ಪ್ಲಾನ್ ವರ್ಕೌಟ್ ಆಗುತ್ತಿಲ್ಲ. ನಾಲ್ಕನೇ ದಿನವಾದ ಇಂದೂ ಸಹ ದುರಸ್ತಿ ಕಾರ್ಯ ನಡೆಯುತ್ತಿದೆ.
ರೋಪ್ ಬಲೆಯಲ್ಲಿ ಮರಳು ಚೀಲಗಳನ್ನು ತುಂಬಿ ಗೇಟ್ ಕಿತ್ತುಹೋಗಿರುವ ಸ್ಥಳದಲ್ಲಿ ಬಿಡುವ ಕೆಲಸ ನಡೆದಿದೆ. ಇದಕ್ಕಾಗಿ ಸುಮಾರು 100 ಟನ್ ಸಾಮರ್ಥ್ಯದ ಕ್ರೇನ್ ಬಂದಿದೆ. ಅನೇಕ ತಂತ್ರಜ್ಞರು ಸಹ ಸ್ಥಳದಲ್ಲಿದ್ದಾರೆ. ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್ ಸ್ಥಳಕ್ಕೆ ಆಗಮಿಸಿದ್ದು ಮಾಹಿತಿ ಪಡೆಯುತ್ತಿದ್ದಾರೆ.