ಕುಷ್ಟಗಿ(ಕೊಪ್ಪಳ): ಪಟ್ಟಣದ ಹೊರವಲಯದ ಹೆದ್ದಾರಿ ಮೇಲ್ಸೇತುವೆ ಬಳಿ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದಲ್ಲಿ ಲಾರಿ ಚಾಲಕನ ನಿರ್ಲಕ್ಷದಿಂದ ಸಂಭವಿಸುತ್ತಿದ್ದ ಭೀಕರ ಅಪಘಾತ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದು, ಸ್ಥಳೀಯರು ಲಾರಿ ಚಾಲಕನನ್ನು ತಾರಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಹೆದ್ದಾರಿಯಿಂದ ಸರ್ವಿಸ್ ರಸ್ತೆಗೆ ಬಂದ ಟ್ರಕ್ ಚಾಲಕ ಸೂಚನೆ ನೀಡದೆ ಏಕಾಏಕಿ ಸಿಂಧನೂರು ರಸ್ತೆಯತ್ತ ಲಾರಿಯನ್ನು ಟರ್ನ್ ಮಾಡಿದ್ದಾನೆ. ಪರಿಣಾಮ ಮುಂದೆ ಹೊರಟಿದ್ದ ತಾವರಗೇರಾ ಮೂಲದ ವ್ಯಕ್ತಿಯ ಬೈಕ್ಗೆ ಡಿಕ್ಕಿ ಹೊಡೆದಿದೆ.
ಅದೃಷ್ಟವಶಾತ್ ಅವಘಡದಲ್ಲಿ ಬೈಕ್ ಸವಾರಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದು, ಹಿಂಬದಿ ಸವಾರನಿಗೆ ಸಣ್ಣ ಗಾಯಗಳಾಗಿವೆ. ಬೈಕ್ ಸವಾರಿಬ್ಬರು ಪಿಯುಸಿ ಪೂರಕ ಪರೀಕ್ಷೆ ಮುಗಿಸಿಕೊಂಡು ತಾವರಗೇರಾ ಕಡೆ ಹೋರಟಿದ್ದರು ಎನ್ನಲಾಗಿದೆ. ನಂತರ ಲಾರಿ ಚಾಲಕನನ್ನು ಸ್ಥಳೀಯರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಸರ್ವಿಸ್ ರಸ್ತೆಯನ್ನು ಡಾಂಬರೀಕರಣಗೊಳಿಸಲಾಗಿದ್ದು, ಹೆದ್ದಾರಿ ಸಂಪರ್ಕಿಸುವ ಕ್ರಾಸ್ನಲ್ಲಿ ರೋಡ್ ಬ್ರೇಕರ್ ಅಳವಡಿಸಿಲ್ಲ. ಹೀಗಾಗಿ ಇಂತಹ ಅವಘಡಗಳು ನಡೆಯುತ್ತಿದ್ದು, ರೋಡ್ ಬ್ರೇಕರ್ ನಿರ್ಮಿಸುವಂತೆ ಸ್ಥಳೀಯರು ಒತ್ತಾಯಿಸಿದರು.