ಗಂಗಾವತಿ: ತಾಲೂಕಿನ ಚಿಕ್ಕಜಂತಕಲ್ ಬಳಿ ಇರುವ ಗಂಗಾವತಿ ಕಂಪ್ಲಿ ಸೇತುವೆಯ ಮೇಲಿನ ಸಾರ್ವಜನಿಕ ಸಂಚಾರವನ್ನು ದಿಢೀರ್ ರದ್ದು ಮಾಡಿದ್ದರಿಂದ ನೂರಾರು ಪ್ರಯಾಣಿಕರು ತೀವ್ರವಾಗಿ ಪರದಾಡಿದ ಘಟನೆ ನಡೆಯಿತು. ಜಲಾನಯನ ಪ್ರದೇಶದಲ್ಲಿ ಅಪಾರ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ತುಂಗಭದ್ರಾ ಜಲಾಶಯಕ್ಕೆ ಅಧಿಕ ನೀರು ಹರಿದು ಬರುತ್ತಿದೆ. ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ.
ಹೀಗಾಗಿ, ನದಿಯಲ್ಲಿ ಪ್ರವಾಹದ ಸನ್ನಿವೇಶ ನಿರ್ಮಾಣವಾಗಿದೆ. ಒಂದು ಲಕ್ಷ ಕ್ಯೂಸೆಕ್ಗೂ ಅಧಿಕ ಪ್ರಮಾಣದ ನೀರು ಹರಿಸುತ್ತಿರುವುದರಿಂದ ನದಿಯಲ್ಲಿ ಅಪಾಯದ ಮಟ್ಟ ಮೀರಿ ನೀರು ಹರಿಸಲಾಗುತ್ತಿದೆ. ಇದೀಗ ಗಂಗಾವತಿ-ಕಂಪ್ಲಿ ಸೇತುವೆ ಮುಳುಗಡೆಯ ಭೀತಿ ಎದುರಾಗಿದೆ.
ಹೀಗಾಗಿ, ಯಾವುದೇ ಕ್ಷಣದಲ್ಲಿ ಅಪಾಯ ಎದುರಾಗಬಹುದು ಎಂಬ ಮುಂಜಾಗ್ರತೆಯಿಂದಾಗಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸೇತುವೆ ಮೇಲಿನ ಸಾರ್ವಜನಿಕ ವಾಹನಗಳ ಸಂಚಾರವನ್ನು ರದ್ದು ಮಾಡಿದ್ದಾರೆ. ಕಂಪ್ಲಿ-ಗಂಗಾವತಿ ಮಧ್ಯ ನಿತ್ಯ ಸಂಚರಿಸುವ ನೂರಾರು ಜನ, ರದ್ದಾದ ಆದೇಶ ಗೊತ್ತಿಲ್ಲದೇ ಆಗಮಿಸಿದರು. ಈ ಸಂದರ್ಭದಲ್ಲಿ ಸಂಚಾರಕ್ಕೆ ಮುಕ್ತಗೊಳಿಸುವಂತೆ ಪಟ್ಟು ಹಿಡಿದು ಪೊಲೀಸರೊಂದಿಗೆ ವಾಗ್ವಾದ ಮಾಡಿದ ಘಟನೆ ನಡೆಯಿತು.
ಇದನ್ನೂ ಓದಿ: ಕೊಡಗಿನ ಮಳೆಹಾನಿ ಪ್ರದೇಶಗಳಿಗೆ ಸಚಿವ ಬಿ. ಸಿ ನಾಗೇಶ್ ಭೇಟಿ, ಪರಿಶೀಲನೆ