ಕೊಪ್ಪಳ : ನಾಳೆ ವರ್ಷದ ಮೊದಲ ಸೂರ್ಯಗ್ರಹಣ ಒಂದೆಡೆಯಾದ್ರೆ ಉತ್ತರ ಕರ್ನಾಟಕ ಭಾಗದಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಆಚರಣೆ ಮಾಡಲಾಗುತ್ತದೆ. ಧಾರ್ಮಿಕ, ಪೌರಾಣಿಕ ಹಾಗೂ ರೈತ ಮತ್ತು ಎತ್ತುಗಳ ನಡುವಿನ ಬಾಂಧವ್ಯದ ಸಂಕೇತದ ನಂಟು ಈ ಆಚರಣ ಹಿಂದೆ ಇದೆ.
ಈ ಹಬ್ಬ ರೈತ, ಮಣ್ಣು (ಭೂಮಿ) ಮತ್ತು ಎತ್ತುಗಳ ನಡುವೆ ಇರುವ ಅನನ್ಯ ಅವಿನಾಭಾವ ಸಂಬಂಧದ ಸಂಕೇತ. ಎತ್ತು, ಭೂಮಿ ಇಲ್ಲದೆ ರೈತನ ಬದುಕು ಇಲ್ಲ. ರೈತನಿಲ್ಲದೆ ಜಗತ್ತಿನ ಹಸಿವು ನೀಗಲಾರದು. ರೈತನಿಗೆ ಭೂಮಿ ಎಷ್ಟು ಮುಖ್ಯವೋ, ಎತ್ತುಗಳು ಸಹ ಅಷ್ಟೇ ಅವಶ್ಯ. ಹೀಗಾಗಿಯೇ ನಮ್ಮ ರೈತರು ತಮ್ಮ ಎತ್ತುಗಳಿಗೆ ಕರಿಯ, ಬಿಳಿಯ, ಹನುಮ, ರಾಮ ಎಂದು ಹೆಸರಿಟ್ಟು ಉತ್ತುವಾಗ, ಬಿತ್ತುವಾಗ ಹಂತಿ ಪದಗಳನ್ನು ಹಾಡುತ್ತಿದ್ದರು.
ಕರಿ ಎತ್ತು ಕಾಳಿಂಗ, ಬಿಳಿ ಎತ್ತು ಮಾಲಿಂಗ ಎಂದು ಪದಕಟ್ಟಿ ಹಾಡುತ್ತಿದ್ದರು. 'ಬರೀ ಎತ್ತುಗಳು ಅಲ್ಲ, ಅವು ನಮ್ಮ ಮನೆಯ ಮುತ್ತುಗಳು' ಎಂದು ರೈತರು ಅಭಿಮಾನದಿಂದ ಕರೆಯುವುದು ಉಂಟು. ವರ್ಷಪೂರ್ತಿ ರೈತನ ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ಎತ್ತುಗಳಿಗೆ ಕೃತಜ್ಞತೆ ಸಲ್ಲಿಸುವ ಹಿನ್ನೆಲೆಯಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಆಚರಣೆ ಮಾಡಲಾಗುತ್ತಿದೆ. ಹೀಗಾಗಿ ಮಣ್ಣೆತ್ತಿನ ಅಮವಾಸ್ಯೆಯ ದಿನ ಮಣ್ಣಿತ್ತುಗಳಿಗೆ ಪ್ರತಿಯೊಬ್ಬರು ಪೂಜಿಸುವಂತಹ ಪರಂಪರೆ ನಡೆದುಕೊಂಡು ಬಂದಿದೆ ಎನ್ನುತ್ತಾರೆ ಹಿರಿಯ ಸಾಹಿತಿ ಡಾ.ಮಹಾಂತೇಶ ಮಲ್ಲನಗೌಡರ.
ಮುಂಗಾರು ಬಿತ್ತನೆಯ ಎಲ್ಲಾ ಕಾರ್ಯಗಳು ಈ ಹಬ್ಬದ ಸಂದರ್ಭದಲ್ಲಿ ಮುಗಿದಿರುತ್ತದೆ. ಈ ಅವಧಿಯಲ್ಲಿ ಎತ್ತುಗಳಿಗೆ ಕೆಲಸ ಇರುವುದಿಲ್ಲ. ಎತ್ತುಗಳಿಗೆ ರೈತರು ಕೆಲಸದ ವಿರಾಮ ನೀಡಿರುತ್ತಾರೆ. ಉತ್ತುವ ಬಿತ್ತುವ ಕಾರ್ಯದಲ್ಲಿ ರೈತರಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ಅವುಗಳನ್ನ ಗೌರವಿಸುವ ಹಾಗೂ ಕೃತಜ್ಞತೆ ಸಲ್ಲಿಸುವ ಸಲುವಾಗಿ ಮಣ್ಣೆತ್ತಿನ ಅಮವಾಸ್ಯೆ ಸಂಭ್ರಮದಿಂದ ಆಚರಿಸುತ್ತಾ ಬರುತ್ತಿದ್ದಾರೆ. ಈ ಆಚರಣೆಗೆ ಧಾರ್ಮಿಕ ಹಾಗೂ ಪೌರಾಣಿಕ ಹಿನ್ನೆಲೆಯೂ ಇದೆ.
ಮಣ್ಣೆತ್ತಿನ ಅಮಾವಾಸ್ಯೆ ಆಚರಣೆಗೆಗಾಗಿ ಕುಂಬಾರರು ಮಣ್ಣಿನ ಎತ್ತುಗಳನ್ನು ಮಾಡಿ ಮಾರಾಟ ಮಾಡುತ್ತಾರೆ. ಮೊದಲು ಯಾವುದೇ ಕಲರ್ ಇಲ್ಲದೆ ಕೇವಲ ಮಣ್ಣಿನಿಂದ ಮಾಡಿದ ಎತ್ತುಗಳು ಸಿಗುತ್ತಿದ್ದವು. ಪೂಜೆ ಹಾಗೂ ಮನೆಯಲ್ಲಿ ಅಲಂಕಾರಿಕವಾಗಿಡಲು ಬಳಕೆಯಾಗುವಂತಹ ಆಕರ್ಷಕ ಮಣ್ಣಿನ ಎತ್ತುಗಳು ಸಹ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ.
ಕಾಲ ಬದಲಾದಂತೆ ಈಗ ರೈತರ ಮನೆಯಲ್ಲಿ ಎತ್ತುಗಳ ಸಂಖ್ಯೆಯೂ ಕಡಿಮೆಯಾಗಿದೆ. ತಾಂತ್ರಿಕ ಉಪಕರಣಗಳನ್ನು ಬಳಸಿ ಬಹುಪಾಲು ರೈತರು ಕೃಷಿ ಮಾಡುತ್ತಿದ್ದಾರೆ. ಭೂಮಿ ಮತ್ತು ಎತ್ತಿನ ನಡುವೆ ಇರುವ ಅವಿನಾಭಾವ ಸಂಬಂಧವನ್ನು ಮಣ್ಣೆತ್ತಿನ ಆಚರಣೆ ಎತ್ತಿ ತೋರಿಸುತ್ತದೆ.