ಗಂಗಾವತಿ : ತುಂಗಭದ್ರಾ ನದಿಗೆ ಜಲಾಶಯದಿಂದ ಹೆಚ್ಚುವರಿ ನೀರು ಹರಿಸುತ್ತಿರುವ ಪರಿಣಾಮ ತಾಲೂಕಿನ ಆನೆಗೊಂದಿ ಭಾಗದಲ್ಲಿನ ಧಾರ್ಮಿಕ ಕ್ಷೇತ್ರಗಳಿಗೆ ಪ್ರವೇಶ ಸ್ಥಗಿತವಾಗಿದೆ. ನದಿಯತ್ತ ಜನ ಸಂಚರಿಸದಂತೆ ಆನೆಗೊಂದಿ ಪಂಚಾಯತ್‌ನಿಂದ ಆದೇಶ ಹೊರಡಿಸಲಾಗಿದೆ.
ವಿಜಯನಗರದ ಸಾಮ್ರಾಟ ಶ್ರೀಕೃಷ್ಣ ದೇವರಾಯನ ಸಮಾಧಿ(Tomb of krishna devaraya) ಎಂದು ಹೇಳಲಾಗುತ್ತಿರುವ ಆನೆಗೊಂದಿ ಸಮೀಪದ 64 ಕಾಲಿನ ಮಂಟಪ ಜಲಾವೃತವಾಗಿದೆ. ಅಲ್ಲದೇ ವೈಷ್ಣವ ಪಂಥದ ಪ್ರಮುಖ ಧಾರ್ಮಿಕ ತಾಣ ನವವೃಂದಾವನಕ್ಕೆ ಮಾರ್ಗ ಸ್ಥಗಿತವಾಗಿದೆ.
ಹೀಗಾಗಿ, ನಿತ್ಯ ಆನೆಗೊಂದಿಯಿಂದ ಬೋಟ್ ಮೂಲಕ ನಡುಗಡ್ಡೆಯಲ್ಲಿರುವ ನವ ವೃಂದಾವನಕ್ಕೆ ತೆರಳಿ ರಾಯರ ಮಠ ಹಾಗೂ ಉತ್ತರಾದಿ ಮಠದ ಅರ್ಚಕರು ಪೂಜೆ ಸಲ್ಲಿಸುತ್ತಿದ್ದರು. ನದಿಯಲ್ಲಿನ ಪ್ರವಾಹದಿಂದಾಗಿ ಇದೀಗ ವೃಂದಾವನದಲ್ಲಿ ಪೂಜೆ ಸ್ಥಗಿತವಾಗಿದೆ.
ಅಲ್ಲದೇ ನಿತ್ಯ ಉದ್ಯೋಗ ಅರಸಿ ಆನೆಗೊಂದಿಯಿಂದ ಬೋಟ್ ಮೂಲಕ ಹೊಸಪೇಟೆ ಭಾಗಕ್ಕೆ ತೆರಳುತ್ತಿದ್ದ ಮತ್ತು ಮೀನುಗಾರಿಕೆ ಮಾಡುತ್ತಿದ್ದ ನೂರಾರು ಜನರಿಗೆ ನದಿ ಪ್ರವಾಹದಿಂದಾಗಿ ಕೆಲಸವಿಲ್ಲದಂತಾಗಿದೆ.