ಕೊಪ್ಪಳ: ನಾವು ವಾಸಿಸುವ ಮನೆಗಳು ವಾಸ್ತು ಪ್ರಕಾರ ಇರಬೇಕು ಎಂಬುದು ಬಹುಪಾಲು ಜನರ ನಂಬಿಕೆ. ಅದರಂತೆ ದೇವಸ್ಥಾನಗಳೂ ಸಹ ಇದಕ್ಕೆ ಹೊರತಾಗಿಲ್ಲ. ಭಾರತದಲ್ಲಿ ವಿಶೇಷ ಸಮಯದಲ್ಲಿ ನಿರ್ಮಿಸಿದ ಎರಡು ದೇವಸ್ಥಾನಗಳಿವೆ. ಅದರಲ್ಲಿ ಕೊಪ್ಪಳ ಜಿಲ್ಲೆಯ ಪಂಚಪಕ್ಷಿ ಮಾರುತೇಶ್ವರ ದೇವಾಲಯವೂ ಒಂದು.
ಭಾರತದಲ್ಲಿ ಪಂಚಪಕ್ಷಿ ಶಾಸ್ತ್ರದ ಪ್ರಕಾರ ಅಂದರೆ ಅಮೃತ ಘಳಿಗೆಯಲ್ಲಿ ನಿರ್ಮಾಣವಾಗಿರುವ ಎರಡು ದೇವಾಲಯಗಳ ಪೈಕಿ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಎಸ್. ಗಂಗನಾಳ ಗ್ರಾಮದಲ್ಲಿರುವ ಪಂಚಪಕ್ಷಿ ಮಾರುತೇಶ್ವರ ದೇವಸ್ಥಾನವು ಒಂದಾಗಿದೆ. ಮೊತ್ತೊಂದು ಯಾವುದೆಂದರೆ ಒರಿಸ್ಸಾದ ಪುರಿಯಲ್ಲಿರುವ ಜಗನ್ನಾಥ ದೇವಾಲಯವಾಗಿದೆ.
ಈ ಪಂಚಪಕ್ಷಿ ಮಾರುತೇಶ್ವರ ದೇವಸ್ಥಾನ ನಿರ್ಮಾಣ ಮಾಡಲು ಬರೋಬ್ಬರಿ 11 ವರ್ಷ ಬೇಕಾಯಿತಂತೆ. ಇದು ಉದ್ಭವ ಮೂರ್ತಿಯಾಗಿದ್ದು ಸುಮಾರು 40 ವರ್ಷಗಳ ಹಿಂದೆ ಅಮೃತ ಗಳಿಗೆಯಲ್ಲಿ ದೇವಸ್ಥಾನ ಕಟ್ಟಿಸಬೇಕೆಂಬ ಸಂಕಲ್ಪದೊಂದಿಗೆ ದೇವಸ್ಥಾನ ನಿರ್ಮಾಣ ಕಾರ್ಯ ಆರಂಭವಾಯಿತು. ಅಲ್ಲದೆ ಈ ದೇವಾಲಯವನ್ನು ಅಮೃತ ಘಳಿಗೆಯಲ್ಲಿಯೇ ನಿರ್ಮಾಣ ಮಾಡಿರುವುದು ವಿಶೇಷತೆಯಾಗಿದೆ.
ಈ ದೇವಸ್ಥಾನದ ನಿರ್ಮಾಣ ಸಂಕಲ್ಪದ ಹಿಂದೆ ರುದ್ರಗೌಡ ಪೊಲೀಸ್ ಪಾಟೀಲ್ ಹಾಗೂ ಶುಕ್ರಸಾಬ ಎಂಬ ಗುರುಶಿಷ್ಯರ ಕೊಡುಗೆ ಅಪಾರವಿದೆಯಂತೆ. ಪಂಚಪಕ್ಷಿ ಶಾಸ್ತ್ರದ ಪ್ರಕಾರ ದೇವಸ್ಥಾನ ನಿರ್ಮಾಣ ಸಂಕಲ್ಪ ಮಾಡಿದಾಗ ಶರಣ ರುದ್ರಗೌಡ ಅವರಿಗೆ ಸಾಥ್ ನೀಡಿದ್ದು ಅವರ ಶಿಷ್ಯ ಶುಕ್ರಸಾಬ್. ಹೀಗಾಗಿ ಈ ಗುರು-ಶಿಷ್ಯರ ಸಮಾಧಿಯನ್ನು ದೇವಸ್ಥಾನದ ಮುಂದೆಯೇ ನಿರ್ಮಿಸಲಾಗಿದೆ.
ಇನ್ನು ಪಂಚಪಕ್ಷಿ ಶಾಸ್ತ್ರದ ಪ್ರಕಾರ ನಿರ್ಮಾಣವಾಗಿರುವ ಈ ಮಾರುತೇಶ್ವರ ದೇವಾಲಕ್ಕೆ ಬಂದು ಪೂಜೆ ಸಲ್ಲಿಸಿದರೆ ಇಷ್ಟಾರ್ಥಗಳು ಬಹುಬೇಗನೇ ಈಡೇರುತ್ತವೆ ಎಂಬ ನಂಬಿಕೆ ಇದೆ. ಹೀಗಾಗಿ ಈ ದೇವಾಲಯಕ್ಕೆ ನಾನಾ ಭಾಗಗಳಿಂದ ಜನರು ಬಂದು ತಮ್ಮ ಜೀವನದ ಆಗುಹೋಗುಗಳ ಬಗ್ಗೆ ಶಾಸ್ತ್ರ ಕೇಳಿ ಭಕ್ತಿಯಿಂದ ನಮಿಸುತ್ತಾರೆ.