ಕುಷ್ಟಗಿ(ಕೊಪ್ಪಳ): ರೈತರ ಟ್ರ್ಯಾಕ್ಟರ್ ಟ್ರಾಲಿ, ಟ್ಯಾಂಕರ್ ಕದ್ದು, ಕಲರ್ ಕಲರ್ ಪೇಟಿಂಗ್ ಮಾಡಿ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಕುಷ್ಟಗಿ ಪೊಲೀಸರು ಬಂಧಿಸಿ ಅವರಿಂದ ಮೂರು ಟ್ರಾಲಿ, ಒಂದು ಟ್ಯಾಂಕರ್ ಹಾಗೂ ಟಿವಿಎಸ್ ಮೋಪೆಡ್ ವಶಕ್ಕೆ ಪಡೆದಿದ್ದಾರೆ.
ರಸ್ತೆ ಪಕ್ಕದಲ್ಲಿ ನಿಲ್ಲಿಸುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿಗಳು, ಟ್ಯಾಂಕರ್ಗಳೇ ಇವರ ಟಾರ್ಗೆಟ್ ಆಗಿದ್ದವು. ತಮ್ಮದೇ ಟ್ರ್ಯಾಕ್ಟರ್ ಇಂಜಿನ್ ಬಳಸಿ ಟ್ರಾಲಿ ಹಾಗೂ ಟ್ಯಾಂಕರ್ ಕದ್ದು ಇಳಕಲ್‌ನಲ್ಲಿ ಪೇಟಿಂಗ್ ಮಾಡಿಸಿ, ಅರ್ಧ ಬೆಲೆಗೆ ಮಾರಾಟ ಮಾಡುತ್ತಿದ್ದರು.
ಸಿಕ್ಕ ಟ್ರಾಲಿ ಹಾಗೂ ಟ್ಯಾಂಕರ್‌ಗಳು ಹೆಸರೂರು, ದೋಟಿಹಾಳ, ಕಡೇಕೊಪ್ಪ, ಮಿಯ್ಯಾಪೂರ, ಬ್ಯಾಲಿಹಾಳ ಕಳವು ಮಾಡಿರುವ ಬಗ್ಗೆ ಈ ಆರೋಪಿಗಳು ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡಿದ್ದಾರೆ.
ಕದ್ದ ಟ್ರಾಲಿಗಳ ಹಾಗೂ ಟ್ಯಾಂಕರ್, ದ್ವಿಚಕ್ರ ವಾಹನದ ಮೌಲ್ಯ 5,80,000 ರೂ. ಎಂದು ಅಂದಾಜಿಸಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಪಕ್ಕದ ತಾಲೂಕಿನ ಆರೋಪಿಗಳು : ತಾಲೂಕಿನ ಹುನಗುಂದ ತಾಲೂಕಿನ ಸಂಕ್ಲಾಪೂರ ಗ್ರಾಮದ ತಿಮ್ಮಣ್ಣ ಗುರುನಾಥಪ್ಪ ವಡ್ಡರ್, ಹುನಗುಂದ ಆಜಾದ್ ನಗರದ ಅಮರೇಶ್ ಹೊನ್ನಪ್ಪ ಮೂಲಿಮನಿ, ಹುನಗುಂದ ರಾಮಡಗಿ ಕ್ರಾಸ್ ಅಶೋಕ ಶೇಖಪ್ಪ ಭಜಂತ್ರಿ ಹಾಗೂ ಕಾರಟಗಿ ತಾಲೂಕಿನ ಯಲ್ಲಪ್ಪ ಸಂಗಪ್ಪ ವಡ್ಡರ್ ಎಂಬುವರನ್ನ ಬಂಧಿಸಲಾಗಿದೆ. ಇನ್ನೂ ಇಬ್ಬರು ಪರಾರಿಯಾಗಿದ್ದಾರೆ.
ಕಳ್ಳರನ್ನು ಬಂಧಿಸುವಲ್ಲಿ ನೆರವಾದ ಕುಷ್ಟಗಿ ಸಿಪಿಐ ನಿಂಗಪ್ಪ ರುದ್ರಪ್ಪಗೋಳ, ಪಿಎಸ್‌ಐ ತಿಮ್ಮಣ್ಣ ನಾಯಕ್, ಕ್ರೈಂ ವಿಭಾಗದ ಪಿಎಸ್‌ಐ ಮಾನಪ್ಪ ವಾಲ್ಮೀಕಿ, ಎಎಸ್ಐ ತಾಯಪ್ಪ ಅವರಿಗೆ ಕೊಪ್ಪಳ ಎಸ್ಪಿ ಟಿ.ಶ್ರೀಧರ್, ಡಿವೈಎಸ್ಪಿ ಆರ್ ಎಸ್ ಉಜ್ಜನಕೊಪ್ಪ ಶ್ಲಾಘಿಸಿದ್ದಾರೆ.