ಕೊಪ್ಪಳ: ಕಾರ್ಗಿಲ್ ಯುದ್ಧದ ಕರಾಳ ನೆನಪು ಇನ್ನೂ ಮಾಸಿಲ್ಲ. ಹೀಗೆ ಕಾರ್ಗಿಲ್ ಯುದ್ಧದಲ್ಲಿ ಹೋರಾಡುತ್ತಾ ದೇಶಕ್ಕಾಗಿ ಪ್ರಾಣ ಕೊಟ್ಟ ವೀರ ಯೋಧರಲ್ಲಿ ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ವೀರಯೋಧ ಮಲ್ಲಯ್ಯ ಮೇಗಳಮಠ ಅವರೂ ಒಬ್ಬರು.
ಮಲ್ಲಯ್ಯ ಚಿತ್ರಕಲಾ ಶಿಕ್ಷಕನಾಗುವ ಬಯಕೆ ಹೊಂದಿದ್ದರು. ಸೇನೆ ಸೇರುವ ಮುನ್ನ ಅನೇಕ ಚಿತ್ರಗಳನ್ನೂ ಬರೆದು ಗಮನ ಸೆಳೆದಿದ್ದರು. ಅವರ ಆ ಚಿತ್ರಗಳನ್ನು ಕುಟುಂಬದವರು ಇನ್ನೂ ರಕ್ಷಿಸಿಕೊಂಡು ಬಂದಿದ್ದಾರೆ. ಈ ಚಿತ್ರಗಳೂ ಹಾಗು ಮಲ್ಲಯ್ಯನನ್ನು ನೆನೆದು ಅವರ ತಾಯಿ ಕಣ್ಣೀರು ಹಾಕುತ್ತಿದ್ದಾರೆ.
ಮಲ್ಲಯ್ಯ ಹುತಾತ್ಮರಾದ ಮೇಲೆ ಕುಟುಂಬಕ್ಕೆ ಸರ್ಕಾರ ಪರಿಹಾರಧನ ನೀಡಿದೆ ನಿಜ. ಆದ್ರೆ, ಹುತಾತ್ಮ ಯೋಧನ ಸಮಾಧಿಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹಾಗೂ ಗ್ರಾಮದಲ್ಲಿ ಪುತ್ಥಳಿಯನ್ನು ನಿರ್ಮಿಸಬೇಕು ಎಂಬ ಹೆತ್ತ ತಾಯಿಯ ಹಂಬಲಕ್ಕೆ ಸರ್ಕಾರ ಕಿವಿಗೊಡಲಿಲ್ಲ. ಇದು ಮಲ್ಲಯ್ಯ ಕುಟುಂಬ ಹಾಗು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.
ಯೋಧರು ಮಡಿದಾಗ ಸರ್ಕಾರ ಅವರ ತ್ಯಾಗದ ಬಗ್ಗೆ ಗುಣಗಾನ ಮಾಡುತ್ತದೆ. ಆದ್ರೆ ಕೆಲ ದಿನಗಳ ಬಳಿಕ ಇವೆಲ್ಲಾ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮರತೇ ಹೋಗುತ್ತದೆ. ಇನ್ನಾದ್ರೂ ಮಡಿದ ಯೋಧನ ನೆನಪಿಗಾಗಿ ಪುತ್ಥಳಿ ನೆನಪಿಸಿ, ತಾಯಿಯ ಮೊಗದಲ್ಲಿ ಮಂದಹಾಸ ಮೂಡಿಸುವ ಕೆಲಸ ಸರ್ಕಾರದಿಂದ ಆಗಬೇಕಿದೆ.