ಗಂಗಾವತಿ: ವಿದ್ಯಾರ್ಥಿಗಳ ಕೊರತೆಯಿದ್ದು, ಕಾಲೇಜನ್ನು ಸಮೀಪದ ಕಾರಟಗಿಗೆ ಸ್ಥಳಾಂತರಿಸಬೇಕು ಎಂದು ತಾಲೂಕಿನ ಶ್ರೀರಾಮನಗರದ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರು ಏಕಪಕ್ಷೀಯವಾಗಿ ಕೈಗೊಂಡ ನಿರ್ಣಯದಿಂದಾಗಿ ಗ್ರಾಮಸ್ಥರು ಮುತ್ತಿಗೆ ಹಾಕಿ ಪ್ರಾಂಶುಪಾಲರನ್ನು ತರಾಟೆಗೆ ತೆಗೆದುಕೊಂಡರು.
ಒಂದೂವರೆ ದಶಕದ ಹೋರಾಟದ ಫಲವಾಗಿ ಗ್ರಾಮಕ್ಕೆ ಸರ್ಕಾರ ಪ್ರಥಮ ದರ್ಜೆ ಕಾಲೇಜನ್ನು ಮಂಜೂರು ಮಾಡಿದೆ. ದಾನಿಗಳು ಭೂದಾನ ಮಾಡಿದ್ದಾರೆ. ಆದರೆ, ಕಾಲೇಜು ಪ್ರವೇಶ ಪಡೆಯುವ ಮಕ್ಕಳ ಸಂಖ್ಯೆ ಕೊರತೆಯಿದೆ ಎಂಬ ನೆಪವೊಡ್ಡಿ ಪ್ರಾಂಶುಪಾಲ ನಾಗರಾಜ್ ಈ ನಿರ್ಣಯ ಕೈಗೊಂಡಿದ್ದಾರೆ. ಗ್ರಾಮದ ಮುಖಂಡರನ್ನು ಅಥವಾ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರನ್ನು ಪರಿಗಣಿಸದೇ ಏಕಪಕ್ಷೀಯ ನಿರ್ಣಯ ಕೈಗೊಂಡು, ಕಾಲೇಜು ಶಿಕ್ಷಣ ಇಲಾಖೆಗೆ ಪ್ರತ ಬರೆದ ಕ್ರಮ ವಿರೋಧಿಸಿ ಗ್ರಾಮದ ಮುಖಂಡರು, ಉದ್ಯಮಿಗಳು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪ್ರಾಂಶುಪಾಲರು ಕೂಡಲೇ ತಮ್ಮ ಗ್ರಾಮದಿಂದ ತೊಲಗಬೇಕು. ಇಲ್ಲವೇ ಪ್ರಾಂಶುಪಾಲ ಹುದ್ದೆಯನ್ನು ಬೇರೆಯವರಿಗೆ ಪ್ರಭಾರ ನೀಡಿ ಬೇರೆಡೆಗೆ ವರ್ಗಾವಣೆ ಮಾಡಿಸಿಕೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ