ಗಂಗಾವತಿ: ತೋಟಗಾರಿಕಾ ಬೆಳೆಗಳಿಗೆ ಹೇಳಿ ಮಾಡಿಸಿದಂತಿರುವ ಕನಕಗಿರಿ ತಾಲೂಕಿನ ಫಲವತ್ತಾದ ಎರೆ ಭೂಮಿಯಲ್ಲಿ ತೈವಾನ್ ತಳಿಯ ಪೆರಲವನ್ನ ನಾಟಿ ಮಾಡಿದ್ದ ರೈತರು ಭರ್ಜರಿ ಫಸಲು ಪಡೆದಿದ್ದಾರೆ. ಫಸಲೇನೋ ಬಂತು, ಆದ್ರೆ, ಕೊರೊನಾದ ಪರಿಣಾಮದಿಂದ ರಫ್ತು ಮಾಡಲಾಗದೇ ರೈತರು ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಚೆನ್ನೈಗೆ ಕಳುಹಿಸಿ ಅಲ್ಲಿಂದ ಬೇರೆ ರಾಜ್ಯ, ರಾಷ್ಟ್ರಗಳಿಗೆ ಹೋಗಬೇಕಿದ್ದ ತೈವಾನ್ ಪೆರಲ ಇದೀಗ ಅನ್ಯಮಾರ್ಗವಿಲ್ಲದೇ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.
ಕೆ.ಜಿಗೆ 25 ರಿಂದ 40 ರೂಪಾಯಿ ಧಾರಣೆಗೆ ಗ್ರಾಹಕರಿಗೆ ಪೆರಲ/ಸೀಬೆ ದೊರೆಯುತ್ತಿತ್ತು. ಒಂದೊಂದು ಕಾಯಿ ಕನಿಷ್ಠ 400 ಗ್ರಾಂಗಿಂತ ಹೆಚ್ಚು ತೂಕವಿದೆ. ಕೊಯ್ದಾಗ ಒಳ ಭಾಗದಲ್ಲಿನ ತಿರುಳು ತಿಳಿಗೆಂಪಿನಲ್ಲಿರುವುದು ಈ ಹಣ್ಣಿನ ವಿಶೇಷ.