ಕೊಪ್ಪಳ: ಸ್ವಾಮಿಗಳು ಅಂದರೆ ಬರಿ ಮಠ, ಪೂಜೆ, ಪುನಸ್ಕಾರ, ದಾಸೋಹ ಹಾಗೂ ಧಾರ್ಮಿಕ ಕಾರ್ಯಕ್ರಮ ಮಾತ್ರವಲ್ಲ. ಸಾಮಾಜಿಕ ಹೊಣೆಗಾರಿಕೆ ಕಾರ್ಯದಲ್ಲಿ ಸ್ವತಃ ತಾವೇ ನಿಂತು ಕೆಲಸ ಮಾಡುವ ಮೂಲಕ ಸ್ವಾಮಿಗಳಿಗೂ, ಮಠ ಮಾನ್ಯಗಳಿಗೆ ಸಾಮಾಜಿಕ ಹೊಣೆಗಾರಿಕೆ ಇದೆ ಎಂಬುದನ್ನು ಇವರು ತೋರಿಸಿಕೊಟ್ಟಿದ್ದಾರೆ. ಸಾಮಾನ್ಯರಲ್ಲಿ ಸಾಮಾನ್ಯರಾಗಿ ಕೆಸರಿನಲ್ಲಿ ನಿಂತು ಕೆಲಸ ಮಾಡುವ ಮೂಲಕ ಈ ಶ್ರೀಗಳು ಮತ್ತೊಬ್ಬರಿಗೆ ಮಾದರಿಯಾಗಿದ್ದಾರೆ.
ಹೌದು ಮಠಮಾನ್ಯಗಳಿಗೆ, ಸ್ವಾಮಿಗಳಿಗೆ ಸಾಮಾಜಿಕ ಹೊಣೆಗಾರಿಕೆ ಇದೆ. ಆ ಸಾಮಾಜಿಕ ಹೊಣೆಗಾರಿಕೆಯನ್ನು ಅಚ್ಚುಕಟ್ಟಾಗಿ ಮಾಡಬೇಕು ಎಂಬ ಸಂದೇಶ ಸಾರುವ ನಿಟ್ಟಿನಲ್ಲಿ ಕೊಪ್ಪಳದ ಗವಿಮಠದ ಶ್ರೀಗಳು ಮಾಡುತ್ತಿರುವ ಕೆಲಸ ಉದಾಹರಣೆಯಾಗುತ್ತದೆ. ಶ್ರೀಗಳು ಕೈಗೊಂಡಿರುವ ಕಾರ್ಯ ಎಲ್ಲರಿಗೂ ಪ್ರೇರಣೆಯಾಗುವಂತಿದೆ. ಸಾರ್ವಜನಿಕ ಸಹಭಾಗಿತ್ವದಲ್ಲಿ ಜಿಲ್ಲೆಯಲ್ಲಿ ಕೆರೆ ಹೂಳೆತ್ತುವ ಕಾರ್ಯ ಕೈಗೊಳ್ಳುವ ಮೂಲಕ ಜಲಕ್ರಾಂತಿಗೆ ನಾಂದಿ ಹಾಡಿದ್ದಾರೆ.
ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮಿಗಳು, ಕಳೆದ ಮಾರ್ಚ್ 1 ರಿಂದ ತಾಲೂಕಿನಲ್ಲಿರುವ ಸುಮಾರು 24 ಕಿಲೋಮೀಟರ್ ಉದ್ದದ ಹಿರೇಹಳ್ಳವನ್ನು ಪುನಶ್ಚೇತನ ಕಾರ್ಯ ಕೈಗೊಂಡಿದ್ದಾರೆ. ಸಾರ್ವಜನಿಕರ ಸಹಭಾಗಿತ್ವದಲ್ಲಿ ಈ ಕೆಲಸಕ್ಕೆ ಕೈ ಹಾಕಿರುವ ಶ್ರೀಗಳು ಈಗ ಮಠದಲ್ಲಿರುವುದು ತೀರಾ ಅಪರೂಪವಾಗಿದೆ. ಹಿರೇಹಳ್ಳ ಪುನಶ್ಚೇತನ ಕಾರ್ಯದಲ್ಲಿಯೇ ಸಂಪೂರ್ಣವಾಗಿ ತೊಡಗಿಕೊಂಡಿರುತ್ತಾರೆ. ಸ್ವತಃ ಅವರೇ ನಿಂತುಕೊಂಡು ದೈಹಿಕ ಶ್ರಮದ ಕೆಲಸ ಮಾಡುತ್ತಾರೆ.
ಒಂದು ದೊಡ್ಡ ಮಠದ ಸ್ವಾಮೀಜಿ ನಾನು ಎಂಬ ಒಂದು ಸಣ್ಣ ಗರ್ವವೂ ಅವರಲ್ಲಿ ಇಲ್ಲ. ಯಾವುದೇ ಕೆಲಸವಾಗಿರಲಿ ಅದನ್ನು ಬೇರೆಯವರಿಗೆ ಹೇಳುವುದಕ್ಕಿಂತ ಮುಂಚಿತವಾಗಿ ತಾವೇ ಆ ಕೆಲಸ ಮಾಡುತ್ತಾರೆ. ಅದರಂತೆ ಇಂದು ಸಹ ಗವಿಶ್ರೀಗಳು ಹಿರೇಹಳ್ಳದ ಕೆಸರಿನಲ್ಲಿ ನಿಂತುಕೊಂಡು ಕೆಲಸ ಮಾಡಿದ್ದಾರೆ. ಕೊಪ್ಪಳ ತಾಲೂಕಿನ ಕೋಳೂರು ಬಳಿಯ ಬ್ಯಾರೇಜ್ ನ ಹಿರೇಹಳ್ಳದ ನೀರಿಗಿಳಿದು ಸ್ವಚ್ಛತಾ ಕಾರ್ಯ ಮಾಡಿದ್ದಾರೆ. ತೆಪ್ಪದಲ್ಲಿ ನಿಂತು ಜಲಕಳೆಯನ್ನು ಕಿತ್ತಿದ್ದಾರೆ. ಕೋಳೂರು, ಮಂಗಳಾಪುರ ಹಾಗೂ ಹ್ಯಾಟಿಯಿಂದ ಬಂದಿದ್ದ ಜನರೊಂದಿಗೆ ಶ್ರೀಗಳು ನೀರಿನಲ್ಲಿದ್ದ ಅಂತರಗಂಗೆ ಎಂಬ ಜಲ ಕಳೆಯನ್ನು ಕೀಳುವ ಕಾರ್ಯ ಮಾಡಿದರು.
ಇನ್ನು ಬೆಳಗ್ಗೆ 6 ಗಂಟೆಗೆನೇ ಶ್ರೀಗಳೇ ಬಂದು ಸ್ವತಃ ಕೆಲಸ ಮಾಡುತ್ತಿರುವುದರಿಂದ ಈ ಸೇವಾ ಕಾರ್ಯದಲ್ಲಿ ಜನರು ಪಾಲ್ಗೊಳ್ಳುವುದಕ್ಕೆ ಪ್ರೇರಣೆಯಾಗುತ್ತಿದೆ. ಶ್ರೀಗಳು ಬೆಳಿಗ್ಗೆ 6 ಗಂಟೆಗೆ ಬಂದು ಹಿರೇಹಳ್ಳ ಪುನಶ್ಚೇತನ ಕಾರ್ಯದಲ್ಲಿ ತೊಡಗುತ್ತಿದ್ದಾರೆ. ಇಂತಹ ಸ್ವಾಮಿಗಳನ್ನು ನಾವು ಎಲ್ಲೂ ನೋಡಿಲ್ಲ. ಅವರು ಮಾಡುತ್ತಿರುವ ಈ ಕೆಲಸದಿಂದ ಈ ಭಾಗದ ಸುಮಾರು 25 ಹಳ್ಳಿಗಳ ಜನರಿಗೆ ಅನುಕೂಲವಾಗಲಿದೆ. ಇಂತಹ ಶ್ರೀಗಳನ್ನು ಪಡೆದ ನಾವೇ ಧನ್ಯರು ಜನರು ಧನ್ಯತಾಭಾವ ಅರ್ಪಿಸುತ್ತಾರೆ ಅಲ್ಲಿನ ಭಕ್ತಾಧಿಗಳು.
ಒಟ್ಟಾರೆಯಾಗಿ ಗವಿಮಠದ ಶ್ರೀಗಳು ಮಾಡುತ್ತಿರುವ ಕೆಲಸ ಮತ್ತೊಬ್ಬರಿಗೆ ಪ್ರೇರಣೆಯಾಗುತ್ತಿದೆ. ಆಡದೇ ಮಾಡುವವನು ರೂಢಿಯೊಳಗುತ್ತಮನು ಎಂಬ ಮಾತಿಗೆ ಕೊಪ್ಪಳ ಗವಿಮಠದ ಶ್ರೀಗಳು ಅನ್ವರ್ಥಕದಂತಿದ್ದಾರೆ.