ಕುಷ್ಟಗಿ (ಕೊಪ್ಪಳ): ತರಕಾರಿ ಮಾರುಕಟ್ಟೆಯಲ್ಲಿ ಟೊಮ್ಯಾಟೊ ಬೆಲೆ 15 ರೂ.ನಿಂದ 20 ರೂ. ಬೆಲೆ ಇದ್ದಾಗ್ಯೂ ರೈತರು ಮಾರುಕಟ್ಟೆಗೆ ತಂದ ಟೊಮ್ಯಾಟೊಗೆ ಬೆಲೆ ಕಳೆದುಕೊಳ್ಳುತ್ತಿರುವುದಕ್ಕೆ ರೊಚ್ಚಿಗೆದ್ದ ರೈತರು ಎಲ್ಲೆಂದರಲ್ಲಿ ಸುರಿದು ಹೋಗುತ್ತಿದ್ದಾರೆ.
ರೈತರು ಕುಷ್ಟಗಿ ಮಾರುಕಟ್ಟೆಗೆ ತಂದ ಟೊಮ್ಯಾಟೊ, ಹಾಗಲಕಾಯಿ ಮತ್ತಿತರೆ ತರಕಾರಿಗಳನ್ನು ಬನ್ನಿಕಟ್ಟೆ ಸಂತೆ ಮೈದಾನದಲ್ಲಿ ಸೂಕ್ತ ಬೆಲೆ ಸಿಗದೆ ಸುರಿದು ಹೋಗಿದ್ದಾರೆ. ಟೊಮ್ಯಾಟೊ ಹಣ್ಣುಗಳನ್ನು ಬಿಡಾಡಿ ದನಗಳು ತಿನ್ನುತ್ತಿರುವ ದೃಶ್ಯ ಕಂಡು ಬಂತು.
ಕಳೆದ ವಾರದ ಹಿಂದೆ ಟೊಮ್ಯಾಟೊ ಕೆಜಿಗೆ 50 ರೂ. ಇದ್ದ ಬೆಲೆ ಏಕಾಏಕಿ ಕುಸಿತ ಕಂಡಿದೆ. ಸದ್ಯ ಮಾರುಕಟ್ಟೆಯಲ್ಲಿ ಕೆಜಿಗೆ 20 ರೂ.ನಿಂದ 15 ರೂ. ಇದ್ದಾಗ್ಯೂ ರೈತರಿಗೆ ಯೋಗ್ಯ ದರ ಸಿಗದೆ ಸುರಿದು ಹೋಗುತ್ತಿದ್ದಾರೆ.
ಸರ್ಕಾರ ಒಂದು ವರ್ಷದ ಸಂಭ್ರಮಾಚರಣೆಯಲ್ಲಿ ಮುಳಗದೆ ನಷ್ಟ ಅನುಭವಿಸುತ್ತಿರುವ ರೈತರ ನೆರವಿಗೆ ಧಾವಿಸಬೇಕಿದ್ದು, ತೋಟಗಾರಿಕೆ ಇಲಾಖೆ ಮಧ್ಯಪ್ರವೇಶಿಸಿ ಸರ್ಕಾರಕ್ಕೆ ವಾಸ್ತವ ಮಾಹಿತಿ ನೀಡಿ ಸೂಕ್ತ ಬೆಲೆಯ ನ್ಯಾಯ ಕಲ್ಪಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಅರ್.ಕೆ.ದೇಸಾಯಿ ಆಗ್ರಹಿಸಿದ್ದಾರೆ.