ಕೊಪ್ಪಳ: ಜೆಡಿಎಸ್ ಅಭ್ಯರ್ಥಿಗಳನ್ನು ಕಾಂಗ್ರೆಸ್ ಸಚಿವರೇ ಸೋಲಿಸುತ್ತಾರೆ ಎಂದು ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಜಿಲ್ಲೆಯ ಗಂಗಾವತಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಜೊತೆ ಇದ್ದ ಹಾಗೇ ನಾಟಕ ಮಾಡಿ ಕಾಂಗ್ರೆಸ್ ನಾಯಕರು ಜೆಡಿಎಸ್ ಅನ್ನು ಸೋಲಿಸುತ್ತಾರೆ. ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲ್ಲಲು ಕಾಂಗ್ರೆಸ್ ನಾಯಕರೇ ಬಿಡುವುದಿಲ್ಲ. ನಿಖಿಲ್ ಕುಮಾರಸ್ವಾಮಿ ಸೋಲು ಖಚಿತವೆಂದು ಭವಿಷ್ಯ ನುಡಿದರು.
ಇನ್ನು ಸಿಎಂ ಕುಮಾರಸ್ವಾಮಿಗೆ ಸೋಲಿನ ಭಯ ಕಾಡುತ್ತಿದೆ. ರಾಜ್ಯದಲ್ಲಿನ ಇತರೆ ಕ್ಷೇತ್ರಗಳನ್ನು ಬಿಟ್ಟು ಸಿಎಂ ಕುಮಾರಸ್ವಾಮಿ ಮಂಡ್ಯಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಹೆಚ್.ಡಿ. ದೇವೇಗೌಡ ಕುಟುಂಬಕ್ಕೆ ಮಂಡ್ಯ, ಹಾಸನ, ತುಮಕೂರು ಕ್ಷೇತ್ರಗಳೇ ದೇಶವಾಗಿದೆ ಎಂದು ಈಶ್ವರಪ್ಪ ಲೇವಡಿ ಮಾಡಿದರು.
ಸ್ವತಃ ಸಿದ್ದರಾಮಯ್ಯ ಅವರೇ ದೇವೇಗೌಡ್ರನ್ನು ಸೋಲಿಸಲು ನೇತೃತ್ವ ವಹಿಸಿದ್ದಾರೆ. ದೇವೇಗೌಡ್ರನ್ನು ಸಿದ್ದರಾಮಯ್ಯ ಸೋಲಿಸಲಿದ್ದಾರೆ. ಸಿದ್ದರಾಮಯ್ಯ ಅವರ ಆಪ್ತನನ್ನು ಮೈಸೂರಿನಲ್ಲಿ ದೇವೇಗೌಡ್ರು ಸೋಲಿಸ್ತಾರೆ. ನೇರವಾಗಿಯೇ ಕಾಂಗ್ರೆಸ್ನವರು ಬಿಜೆಪಿಗೆ ಬೆಂಬಲ ನೀಡುತ್ತಾರೆ ಎಂದು ಅಭಿಪ್ರಾಯಪಟ್ಟರು.
ಇನ್ನು ಚಿಕ್ಕೋಡಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಉಮೇಶ್ ಕತ್ತಿ ಅವರ ಜೊತೆ ಮಾತನಾಡಿದ್ದೇವೆ. ಅವರು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ. ಸಿದ್ದರಾಮಯ್ಯನೇ ಅವರ ಶಿಷ್ಯರನ್ನು ಸೋಲಿಸಲು ಪಣ ತೊಟ್ಟಿದ್ದಾರೆ. ಕೊಪ್ಪಳದಲ್ಲಿ ಹಿಟ್ನಾಳ್ ಹಾಗೂ ಮೈಸೂರಿನಲ್ಲಿ ವಿಜಯಶಂಕರ ಅವರನ್ನು ಸೋಲಿಸಲು ಟಿಕೆಟ್ ನೀಡಿದ್ದಾರೆ ಎಂದು ಕೆ.ಎಸ್. ಈಶ್ವರಪ್ಪ ಹೇಳಿದರು.