ಕೊಪ್ಪಳ: ಇಲ್ಲಿನ ತಾಲೂಕಿನ ಭಾಗ್ಯನಗರ ಪಟ್ಟಣ ಹಾಗೂ ಓಜನಹಳ್ಳಿಯಲ್ಲಿ ಮನೆ ನಿರ್ಮಿಸಲು ತಮ್ಮ ಜಾಗಗಳಲ್ಲಿ ಗ್ರಾಮಸ್ಥರು ಸಂಗ್ರಹಿಸಿದ್ದ ಮರಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಇದು ಆಕ್ರೋಶಕ್ಕೆ ಗುರಿಯಾಗಿದೆ.
ಮೂರ್ನಾಲ್ಕು ವರ್ಷಗಳಿಂದ ಕಟ್ಟಡ ಪರವಾನಿಗೆ ಸಿಗದಿರುವುದು ಸೇರಿದಂತೆ ಹಲವು ಕಾರಣಗಳಿಂದ ಮನೆಗಳನ್ನು ನಿರ್ಮಿಸದೇ ಹಾಗೆ ಬಿಟ್ಟಿದ್ದರು. ಇದೀಗ ಸಂಗ್ರಹಿಸಿದ್ದ ಮರಳನ್ನು ಕಂಡ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ಮರಳನ್ನು ಸಂಗ್ರಹಿಸಿಕೊಂಡಿದ್ದೀರಿ ಎಂದು ಏಕಾಏಕಿ ಮರಳನ್ನು ಜಪ್ತಿ ಮಾಡಿದ್ದಾರೆ. ಅಧಿಕಾರಿಗಳ ಈ ವರ್ತನೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾವತಿಸಿ ಮರಳು ಹಾಕಿಸಿಕೊಂಡಿದ್ದೇವೆ. ಆದ್ರೆ ಈಗ ಏಕಾಏಕಿ ಬಂದು ಅಕ್ರಮವಾಗಿ ಮರಳು ಸಂಗ್ರಹಿಸಿದ್ದೀರಿ ಎಂದು ಮರಳು ಜಪ್ತಿ ಮಾಡಿದರೆ ಹೇಗೆ ಎಂದು ಅಧಿಕಾರಿಗಳನ್ನು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.
ಅಕ್ರಮವಾಗಿ ಮರಳು ಸಂಗ್ರಹಿಸಿರುವ ದಂಧೆಕೋರರ ಮೇಲೆ ಕ್ರಮ ಜರುಗಿಸಲಿ. ಹಳ್ಳಗಳಲ್ಲಿ ಮರಳು ಲೂಟಿ ಮಾಡುವವರನ್ನು ಬಿಟ್ಟು ಮನೆ ಕಟ್ಟಲೆಂದು ಖರೀದಿಸಿದ ಮರಳನ್ನು ಅಧಿಕಾರಿಗಳು ಜಪ್ತಿ ಮಾಡಿಕೊಂಡು ಹೋಗಿದ್ದಾರೆ. ಬಡವರು, ಆಟೋ ಚಾಲಕರು ಮನೆ ಕಟ್ಟಿಸಲು ಒಂದೆರಡು ಟ್ರಿಪ್ ಮರಳು ಹಾಕಿಸಿಕೊಂಡಿದ್ದಾರೆ. ಅದನ್ನು ಸಹ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಅಧಿಕಾರಿಗಳು ತೋರಿರುವ ಈ ವರ್ತನೆ ನಿಜಕ್ಕೂ ಅನ್ಯಾಯ ಎಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.