ಕೊಪ್ಪಳ: ನಗರದ ಬಿಸಿಎಂ ಹಾಸ್ಟೆಲ್ನ ಐವರು ವಿದ್ಯಾರ್ಥಿಗಳು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ ದೂರು ದಾಖಲಾಗಿದ್ದು ಹಾಸ್ಟೆಲ್ ವಾರ್ಡನ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಹಾಸ್ಟೆಲ್ ವಾರ್ಡನ್, ಹಾಸ್ಟೆಲ್ಗೆ ಮನೆ ಬಾಡಿಗೆ ನೀಡಿರುವ ಮನೆ ಮಾಲೀಕ ಹಾಗೂ ಜೆಸ್ಕಾಂ ಎಂಜಿನಿಯರ್ ವಿರುದ್ಧ ದೂರು ದಾಖಲಾಗಿದೆ. ಹಾಸ್ಟೆಲ್ ವಾರ್ಡನ್ ಬಸವರಾಜನನ್ನು ಈಗಾಗಲೇ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇನ್ನು ಮನೆ ಮಾಲೀಕ ಬಸನಗೌಡ ಕಲಿಕೇರಿ ಹಾಗೂ ಜೆಸ್ಕಾಂ AEE ಸಚಿನ್ ವಿರುದ್ಧ ದೂರು ದಾಖಲಾಗಿದೆ.
ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿರುವ ವಿದ್ಯಾರ್ಥಿಗಳ ಶವಗಳನ್ನು ನಾವು ತೆಗೆದುಕೊಂಡು ಹೋಗುವುದಿಲ್ಲ ಎಂದು ಮೃತ ವಿದ್ಯಾರ್ಥಿಗಳ ಸಂಬಂಧಿಕರು ಶವಾಗಾರದ ಮುಂದೆ ಪ್ರತಿಭಟನೆ ನಡೆಸಿದರು. ಅಧಿಕಾರಿಗಳು ಹಾಗೂ ಹಾಸ್ಟೆಲ್ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಸ್ಟೆಲ್ ಕಟ್ಟಡದ ಮೇಲೆ ವಿದ್ಯುತ್ ತಂತಿಗಳು ಹೋಗಿದ್ದರು ಧ್ವಜದ ಕಂಬವನ್ನು ತರಲು ಕಳಿಸಿದ್ದಾರೆ. ವಿದ್ಯಾರ್ಥಿಗಳನ್ನು ಯಾಕೆ ಕಳಿಸಬೇಕಿತ್ತು. ಈ ದುರಂತಕ್ಕೆ ಅಧಿಕಾರಿಗಳು ಹಾಗೂ ಹಾಸ್ಟೆಲ್ ವಾರ್ಡನ್ ಕಾರಣ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಇಲ್ಲಿಗೆ ಬರಬೇಕು. ಇಲ್ಲದಿದ್ದರೆ ಶವಗಳನ್ನು ಜಿಲ್ಲಾಧಿಕಾರಿ ಕಚೇರಿ ಮುಂದೆ ಇಡುವುದಾಗಿ ಮೃತ ವಿದ್ಯಾರ್ಥಿಗಳ ಸಂಬಂಧಿಕರು ಪಟ್ಟು ಹಿಡಿದಿದ್ದಾರೆ.