ಕೊಪ್ಪಳ: ಸರ್ಕಾರಿ ಶಾಲೆ ಅಂದ್ರೆ ಬಹಳಷ್ಟು ಪೋಷಕರು ಮೂಗು ಮುರಿದು ಖಾಸಗಿ ಶಾಲೆಗಳತ್ತ ಮುಖ ಮಾಡೋದು ಸಾಮಾನ್ಯ ಎನ್ನುವಂತಾಗಿದೆ. ಹೀಗಾಗಿ ಸರ್ಕಾರಿ ಶಾಲೆಗಳು ಮೂಲೆಗುಂಪಾಗುತ್ತಿವೆ. ಸರ್ಕಾರಿ ಶಾಲೆಗಳ ಉಳಿಸುವ ನಿಟ್ಟಿನಲ್ಲಿ ಸರ್ಕಾರವೂ ಸಹ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಈ ನಿಟ್ಟಿನಲ್ಲಿ ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಗ್ರಾಮದಲ್ಲಿರುವ ರೋಟರಿ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಗುರುಸ್ವಾಮಿ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
1ನೇ ತರಗತಿಯಿಂದ 5ನೇ ತರಗತಿಯವರೆಗೆ ಇರುವ ಈ ಸರ್ಕಾರಿ ಶಾಲೆಯಲ್ಲಿ 28 ಮಕ್ಕಳಿದ್ದಾರೆ. ವಿದ್ಯಾರ್ಥಿಗಳಿಗಾಗಿ ತಮ್ಮ ಸ್ವಂತ ಹಣದಲ್ಲಿ ಏನಾದರೊಂದು ಸಹಾಯ ಮಾಡುವ ಶಿಕ್ಷಕ ಗುರುಸ್ವಾಮಿ, ಈ ಬಾರಿ ತಮ್ಮ ಶಾಲೆಯಲ್ಲಿ 1ನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳ ಹೆಸರಲ್ಲಿ ಸಾವಿರ ರೂಪಾಯಿ ಠೇವಣಿ ಇಡುತ್ತಿದ್ದಾರೆ. ಈ ಠೇವಣಿ ಹಣ 18 ವರ್ಷಗಳ ಕಾಲ ಇರಲಿದ್ದುಬಳಿಕ ಬರುವ ಒಟ್ಟು ಹಣವನ್ನು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳಬಹುದು.
ಗುರುಸ್ವಾಮಿ ಈ ರೀತಿ ಠೇವಣಿ ಇಡುವುದಾಗಿ ಘೋಷಿಸಿದ ತಕ್ಷಣವೇ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಮುಂದಾಗಿದ್ದು, 6 ಮಂದಿ ಪೋಷಕರು ಈಗಾಗಲೇ ಮಕ್ಕಳನ್ನು ಅಡ್ಮಿಷನ್ ಮಾಡಿಸಿದ್ದಾರಂತೆ. ಅಲ್ಲದೆ ತಮ್ಮ ವೇತನದಲ್ಲಿ ಮಕ್ಕಳಿಗೆ ಅಗತ್ಯವಿರುವ ಕಿಟ್ಗಳನ್ನೂ ಕೊಡಿಸುತ್ತಾರಂತೆ. ಸದ್ಯ ಇವರ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದು, ಶಿಕ್ಷಕರ ಕಾರ್ಯ ನೆನೆದು ಕೃತಜ್ಞತೆ ಅರ್ಪಿಸುತ್ತಾರೆ. ತಮ್ಮ ಕರ್ತವ್ಯ ಒಂದೆಡೆಯಾದರೆ ಸರ್ಕಾರಿ ಶಾಲೆ ಉಳಿಸುವ ಸದಾಶಯ ಮೆಚ್ಚುವಂಥದ್ದು.