ಕೊಪ್ಪಳ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಪರಿಣಾಮ ಶಿಕ್ಷಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಇಂದರಗಿ ಕ್ರಾಸ್ ಬಳಿ ನಡೆದಿದೆ.
ನವೀನ್ ಮೃತ ಶಿಕ್ಷಕ ಎಂದು ಗುರುತಿಸಲಾಗಿದೆ. ಇವರು ಗಂಗಾವತಿ ತಾಲೂಕಿನ ಕೋಟಯ್ಯ ಕ್ಯಾಂಪ್ ಶಾಲೆಯ ಶಿಕ್ಷಕರಾಗಿದ್ದಾರೆ. ಮೃತ ಶಿಕ್ಷಕ ಸೇರಿದಂತೆ ಮೂರು ಜನ ಕಾರಿನಲ್ಲಿ ಗಂಗಾವತಿಯಿಂದ ದಾವಣಗೆರೆಗೆ ಹೊರಟಿದ್ದರು. ಈ ವೇಳೆ ಇಂದರಗಿ ಕ್ರಾಸ್ ಬಳಿಯ ತಿರುವಿನಲ್ಲಿ ಕಾರು ನಿಯಂತ್ರಣಕ್ಕೆ ಸಿಗದೆ ಪಲ್ಟಿಯಾಗಿದೆ.
ಘಟನೆಯಲ್ಲಿ ನವೀನ್ ತಲೆಗೆ ತೀವ್ರವಾದ ಪೆಟ್ಟು ಬಿದ್ದಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದು, ಉಳಿದಿಬ್ಬರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.