ಗಂಗಾವತಿ: ಖಾಸಗಿ ಮಲ್ಟಿಸ್ಪೆಷಲ್ ಆಸ್ಪತ್ರೆಗಳ ಗುಣಮಟ್ಟದಲ್ಲಿ ರೋಗಿಗಳಿಗೆ ಉಚಿತ ಚಿಕಿತ್ಸೆ ಸೇರಿದಂತೆ ಹತ್ತಾರು ಸೌಲಭ್ಯಗಳನ್ನು ನೀಡಿ ರಾಜ್ಯದ ಗಮನ ಸೆಳೆದಿರುವ ಇಲ್ಲಿನ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಸೋಮವಾರ ಮಕರ ಸಂಕ್ರಾಂತಿ ಹಬ್ಬದಂದು ವಿಶೇಷ ಸಿಹಿ ಊಟ ನೀಡಲಾಯಿತು. ನಾನಾ ಖಾಯಿಲೆಗಳ ಶಮನಕ್ಕಾಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಹಾಗೂ ಅವರ ಕುಟುಂಬ ಸದಸ್ಯರು ಹಬ್ಬದ ಸಂಭ್ರಮದಿಂದ ವಂಚಿತರಾಗದಿರಲಿ ಎಂಬ ಉದ್ದೇಶದಿಂದ ಈ ವ್ಯವಸ್ಥೆ ಕಲ್ಪಿಸಲಾಗಿತ್ತು.
ಸರ್ಕಾರಿ ಉಪ ವಿಭಾಗ ಹಾಗೂ ಮಹಿಳಾ ಹಾಗು ಮಕ್ಕಳ ಆಸ್ಪತ್ರೆಯ ರೋಗಿಗಳಿಗೆ ಕಳೆದ ಹಲವು ವರ್ಷದಿಂದ ಗುಣಮಟ್ಟದ ಆಹಾರ ಒದಗಿಸುತ್ತಿರುವ ಆಹಾರ ಪೂರೈಕೆದಾರ ವಿರೂಪಾಕ್ಷಪ್ಪ ಕುಂಬಾರ, ಹಬ್ಬ-ಹರಿದಿನಗಳಂತಹ ವಿಶೇಷ ಸಂದರ್ಭದಲ್ಲಿ ರೋಗಿಗಳಿಗೆ ವಿಶೇಷ ಆಹಾರದ ವ್ಯವಸ್ಥೆ ಕಲ್ಪಿಸುತ್ತಾರೆ. ಹೊಸವರ್ಷಾಚರಣೆ, ಸಂಕ್ರಾಂತಿ, ಯುಗಾದಿ, ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನೋತ್ಸವ, ದೀಪಾವಳಿ, ದಸರಾ, ರಾಜ್ಯೋತ್ಸವ ಹೀಗೆ ವರ್ಷದುದ್ದಕ್ಕೂ ನಾನಾ ಖಾದ್ಯಗಳ ಊಟ ನೀಡುವ ಮೂಲಕ ರೋಗಿಗಳಲ್ಲಿ ಹರ್ಷ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಒಂದೇ ಗುಣಮಟ್ಟದ ಆಹಾರ: ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಮಾತ್ರ ಊಟ ನೀಡಲಾಗುತ್ತಿದೆ. ಒಂದೊಮ್ಮೆ ಆಸ್ಪತ್ರೆಯ ಸಿಬ್ಬಂದಿಗೆ ಊಟ ನೀಡಿದರೂ ರೊಗಿಗಳು ಮತ್ತು ಸಿಬ್ಬಂದಿಗೂ ಪ್ರತ್ಯೇಕ ಗುಣಮಟ್ಟದ ಆಹಾರ ನೀಡಲಾಗುತ್ತದೆ ಎಂಬ ಆರೋಪವಿರುತ್ತದೆ. ಆದರೆ ಗಂಗಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ಈ ತಾರತಮ್ಯಕ್ಕೆ ಅವಕಾಶವಿಲ್ಲ. ಇಲ್ಲಿನ ಆಡಳಿತ ವೈದ್ಯಾಧಿಕಾರಿ ಈಶ್ವರ ಸವುಡಿ ಈ ನಿಟ್ಟಿನಲ್ಲಿ ವಿಶೇಷ ಮುತುವರ್ಜಿ ವಹಿಸಿದ್ದಾರೆ.
ರೋಗಿಗಳಿಗೆ ನೀಡುವ ಆಹಾರ ಉತ್ತಮ ಗುಣಮಟ್ಟದಲ್ಲಿ ಇರಬೇಕು ಎಂಬ ಸೂಚನೆಯನ್ನು ಅವರು ನೀಡಿದ್ದಾರೆ. ಹೀಗಾಗಿ ಪ್ರತಿನಿತ್ಯ ಉಪ ವಿಭಾಗ ಮತ್ತು ಮಹಿಳಾ ಹಾಗು ಮಕ್ಕಳ ಆಸ್ಪತ್ರೆಯಲ್ಲಿ ರೋಗಿಗಳಿಗೆ ನೀಡುವ ಬೆಳಿಗ್ಗಿನ ಉಪಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟವನ್ನೇ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗೂ ನೀಡಲಾಗುತ್ತದೆ. ರೋಗಿಗಳಿಗೆ ಯಾವ ಗುಣಮಟ್ಟದ ಆಹಾರ ನೀಡಲಾಗುತ್ತದೋ ಅದೇ ಆಹಾರವನ್ನು ವೈದ್ಯರು, ಸಿಬ್ಬಂದಿಯೂ ಸೇವಿಸುತ್ತಾರೆ.
ಹಬ್ಬದಂದು ತರೇವಾರಿ ಖಾದ್ಯಗಳು: ಸಂಕ್ರಾಂತಿ ಅಂಗವಾಗಿ ಆಸ್ಪತ್ರೆಯ ರೋಗಿಗಳಿಗೆ ನೀಡಲು ಎಳ್ಳು-ಶೇಂಗಾ ಮಿಶ್ರಿತ ಹೋಳಿಗೆ, ಚಿತ್ರಾನ್ನ, ಟೊಮೆಟೊ ಬಾತ್, ಸಂಡಿಗೆ, ಬಾಳೆಹಣ್ಣು ನೀಡಲಾಗಿತ್ತು. ವೈದ್ಯರು ಹಾಗೂ ಸಿಬ್ಬಂದಿಗೆ ಖಡಕ್ ರೊಟ್ಟಿ, ಬದನೆಕಾಯಿ ಪಲ್ಯ, ತರಕಾರಿ ಸಲಾಡ್ ನೀಡಲಾಗಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿದ ಆಹಾರ ಪೂರೈಕೆದಾರ ವಿರೂಪಾಕ್ಷಪ್ಪ ಕುಂಬಾರ, "ರೋಗಿಗಳಿಗೆ ನೀಡುವ ಆಹಾರ ಪೌಷ್ಠಿಕಾಂಶ ಮತ್ತು ಗುಣಮಟ್ಟದಲ್ಲಿ ಇರಬೇಕು ಎಂದು ಆಡಳಿತ ವೈದ್ಯಾಧಿಕಾರಿ ಸೂಚನೆ ನೀಡಿದ್ದಾರೆ. ಅಲ್ಲದೇ ಗುಣಮಟ್ಟದ ಖಾತ್ರಿಗಾಗಿ ವೈದ್ಯರೂ ಅದೇ ಆಹಾರ ಸ್ವೀಕರಿಸುತ್ತಾರೆ. ಪ್ರತಿ ಹಬ್ಬದ ಸಂದರ್ಭದಲ್ಲಿ ತರಹೇವಾರಿ ಖಾದ್ಯಗಳನ್ನು ರೋಗಿಗಳಿಗೆ ನೀಡಲಾಗುತ್ತಿದೆ" ಎಂದರು.
ಇದನ್ನೂ ಓದಿ: ದಾವಣಗೆರೆ: ಸರಳವಾಗಿ ನೆರವೇರಿದ ಹರ ಜಾತ್ರಾ ಮಹೋತ್ಸವ