ಗಂಗಾವತಿ: ಮಹಾತ್ಮ ಗಾಂಧೀಜಿ ಅವರ ಜನ್ಮ ದಿನಾಚರಣೆ ಅಂಗವಾಗಿ ಆಫ್ರಿಕಾ ಖಂಡದ ಡಿಆರ್ ಕಾಂಗೋ ದೇಶದ ರಾಜಧಾನಿ ಕಿನ್ಶಾಸಾದಲ್ಲಿ ಗಂಗಾವತಿಯ ಯುವಕರ ನೇತೃತ್ವದಲ್ಲಿ ನಡೆದ ಸ್ವಚ್ಛತಾ ಅಭಿಯಾನ ಗಮನ ಸೆಳೆದಿದೆ.
ಭಾರತ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನದಿಂದ ಪ್ರೇರಣೆಗೊಂಡ ಯುವಕರು ಮಹಾತ್ಮಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಅಂಗವಾಗಿ ಕಿನ್ಶಾಸಾ ನಗರದ ಗಾರ್ ಸಂತ್ರಾಲ್ ಸೇರಿದಂತೆ ಪ್ರಮುಖ ಸ್ಥಳ, ರಸ್ತೆಗಳಲ್ಲಿ ಕಸ ಗುಡಿಸುವ ಮೂಲಕ ಸ್ವಚ್ಛತಾ ಅಭಿಯಾನ ಮಾಡಿದರು.
ಡಿ.ಆರ್. ಕಾಂಗೋದ ಭಾರತದ ರಾಯಭಾರಿ ರಾಮ್ ಕರನ್ ವರ್ಮಾ ಅಭಿಯಾನಕ್ಕೆ ಚಾಲನೆ ನೀಡಿದರು. ಗಂಗಾವತಿಯ ಮೋಹಿನ್ ನೇತೃತ್ವದಲ್ಲಿ ಸ್ಥಳೀಯ ಯುವಕರು ಪಾಲ್ಗೊಂಡಿದ್ದರು. ಅಲ್ಲದೇ ಸೈಕಲ್ ಮೂಲಕ ವಿಶ್ವ ಪರ್ಯಟನೆ ಮಾಡುತ್ತಿರುವ ಭಾರತದ ಸೈಕಲ್ ಬಾಬಾ ಎಂದು ಖ್ಯಾತಿ ಪಡೆದಿರುವ ಹರಿಯಾಣ ಡಾ.ರಾಜ್ ಪಾಲ್ಗೊಂಡಿದ್ದರು.
ಸ್ವಚ್ಛತಾ ಅಭಿಯಾನದ ಬಳಿಕ ಕಾಲ್ನಡಿಗೆಯಲ್ಲಿ ಧೂತ ಕಚೇರಿಗೆ ತೆರಳಿದ ಭಾರತದ ನಾನಾ ರಾಜ್ಯದ ಯುವಕರು, ಮಾಹಾತ್ಮ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಬಳಿಕ ಭಾರತೀಯ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಯುವಕರ ಟೀ-ಶರ್ಟ್ ಮೇಲೆ ಒಂದು ಕಡೆ ಭಾರತ ಮತ್ತೊಂದು ಕಡೆ ಡಿ.ಆರ್. ಕಾಂಗೋ ದೇಶದ ನಕಾಶೆ ಚಿಹ್ನೆ ಇತ್ತು. ಸ್ವಚ್ಛ ಕಾಂಗೋ ಅಭಿಯಾನದಡಿ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಗಂಗಾವತಿ ಯುವಕ ಮೋಹಿನ್ ತಿಳಿಸಿದ್ದಾರೆ.
ಇದನ್ನೂ ಓದಿ : ಡಾ ಸಿ ಆರ್ ಚಂದ್ರಶೇಖರ್ಗೆ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ.. ಬಹುಮಾನದ ಹಣ ನಿಮ್ಹಾನ್ಸ್ಗೆ ನೀಡಿದ ವೈದ್ಯ