ಕೊಪ್ಪಳ: ಹೈದರಾಬಾದ್ನಲ್ಲಿ ಪಶುವೈದ್ಯೆಯ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಘಟನೆ ಖಂಡಿಸಿ ಎಐಡಿಎಸ್ಓ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ನಗರದ ಅಶೋಕ ಸರ್ಕಲ್ನಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಅತ್ಯಾಚಾರ ಹಾಗೂ ಕೊಲೆ ಮಾಡಿದ ಆರೋಪಿಗಳನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು. ದೇಶದಲ್ಲಿ ಮಹಿಳೆಯರಿಗೆ, ಹೆಣ್ಣು ಮಕ್ಕಳಿಗೆ ಭದ್ರತೆ ಇಲ್ಲದಂತಾಗಿದೆ. ಮಹಿಳೆಯರ ಹಾಗೂ ಹೆಣ್ಣುಮಕ್ಕಳ ಮೇಲೆ ನಿರಂತರ ದೌರ್ಜನ್ಯ, ಅತ್ಯಾಚಾರ, ಕೊಲೆ ನಡೆಯುತ್ತಲೇ ಇವೆ. ಅತ್ಯಾಚಾರಿಗಳಿಗೆ ಕಾನೂನಿನ ಭಯವಿಲ್ಲದಂತಾಗಿದೆ. ಆದ್ದರಿಂದಲೇ ಇಂತಹ ಘಟನೆಗಳು ನಡೆಯುತ್ತಲೇ ಇವೆ. ಅತ್ಯಾಚಾರಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಹಿರಿಯ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ನೈತಿಕತೆಯಿಂದ ನಮ್ಮ ದೇಶ ನೈತಿಕ ಅಧಃಪತನದತ್ತ ಸಾಗುತ್ತಿದೆ. ಇಂದಿನ ರಾಜಕಾರಣದ ವ್ಯವಸ್ಥೆಯೂ ಇದಕ್ಕೆ ಕಾರಣವಾಗಿದೆ. ಮಹಿಳೆಯರಿಗೆ, ಹೆಣ್ಣು ಮಕ್ಕಳಿಗೆ ಭದ್ರತೆ ಇಲ್ಲದಂತಾಗಿದೆ. ನಮ್ಮ ರಕ್ಷಣೆ ನಾವೇ ಮಾಡಿಕೊಳ್ಳಬೇಕು. ಅದರಲ್ಲೂ ಮಹಿಳೆಯರು, ಹೆಣ್ಣು ಮಕ್ಕಳು ಸ್ವಯಂ ರಕ್ಷಣೆ ಮಾಡಿಕೊಳ್ಳಬೇಕು. ಕರಾಟೆಯಂತಹ ಆತ್ಮರಕ್ಷಣೆಯ ಕಲೆಯನ್ನು ಮಹಿಳೆಯರು, ಹೆಣ್ಣುಮಕ್ಕಳು ಕಲಿಯುವ ಮೂಲಕ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು. ಮುಖಂಡರಾದ ಶರಣು ಗಡ್ಡಿ, ಶರಣಬಸವ ಪಾಟೀಲ್, ರಮೇಶ ಸೇರಿದಂತೆ ಮೊದಲಾದವರು ನೇತೃತ್ವ ವಹಿಸಿದ್ದರು.