ಕೊಪ್ಪಳ: ಮೂಲ ಮತ್ತು ವಲಸಿಗರು ಎಂಬ ಭಿನ್ನಾಭಿಪ್ರಾಯ ಬಿಜೆಪಿಯಲ್ಲಿ ಇಲ್ಲ. ಬಿಜೆಪಿಯಲ್ಲಿ ಸಣ್ಣಪುಟ್ಟ ಗೊಂದಲಗಳಿದ್ದವು. ಕೆಲವರು ನೋವುಗಳನ್ನು ಹೇಳಿಕೊಂಡರು. ಅದನ್ನು ನಮ್ಮ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬಗಹರಿಸಿದ್ದಾರೆ. ಮೂಲ ಮತ್ತು ವಲಿಸಗರು ಎಂಬ ಕಿತ್ತಾಟ ಕಾಂಗ್ರೆಸ್ ನಲ್ಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಣ್ಣ ವಲಸಿಗರು ಎಂಬ ಭಿನ್ನಾಭಿಪ್ರಾಯ ಕಾಂಗ್ರೆಸ್ ನಲ್ಲಿದೆ. ಕಾಂಗ್ರೆಸ್ ನಲ್ಲಿ ಈಗಲೇ ಮ್ಯೂಸಿಕಲ್ ಚೇರ್ ಆಟ ಶುರುವಾಗಿದೆ. ಸಿದ್ದರಾಮಣ್ಣ, ಡಿಕೆಶಿ ನಡುವೆ ಜಗಳ ಪ್ರಾರಂಭಾವಾಗಿದೆ. ಮುಖ್ಯಮಂತ್ರಿ ಸೀಟ್ ಗೆ ಟವೆಲ್ ಹಾಕುವ ಕೆಲಸ ಅಲ್ಲಿ ನಡೆದಿದೆ. ಹೀಗಾಗಿ ಕಾಂಗ್ರೆಸ್ ನಲ್ಲಿ ಭಿನ್ನಾಭಿಪ್ರಾಯವಿದೆ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ನಮ್ಮಲ್ಲಿ ಏನೂ ಗೊಂದಲವಿಲ್ಲ. ಪಕ್ಷ ಚೆನ್ನಾಗಿ ನಡೆಯುತ್ತಿದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ಕುರಿತಂತೆ ನನ್ನ ಜೊತೆ ಏನೂ ಮಾತನಾಡಿಲ್ಲ. ಆದರೆ ನಾನೇ ಅವರ ಜೊತೆ ವೈಯಕ್ತಿಕವಾಗಿ ಮಾತನಾಡಿದ್ದೇನೆ. ಏನೂ ಸಮಸ್ಯೆ ಇಲ್ಲ. ಏನೇ ಸಮಸ್ಯೆ ಇದ್ದು, ಪರಿಹಾರ ಮಾಡಲಾಗುತ್ತದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.