ಕೊಪ್ಪಳ: ಕೊರೊನಾ ಸೋಂಕಿತರ ಬಗ್ಗೆ ನಿರ್ಲಕ್ಷ್ಯ ವಹಿಸದೆ ಅವರಿಗೆ ಆತ್ಮಬಲ, ಮನೋಸ್ಥೈರ್ಯ ತುಂಬುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದ್ದಾರೆ.
ವಿಡಿಯೋ ಸಂದೇಶ ನೀಡಿರುವ ಶ್ರೀಗಳು, ಕೊರೊನಾ ಜಗತ್ತನ್ನೇ ಕಾಡುತ್ತಿರುವ ಒಂದು ಸಾಂಕ್ರಾಮಿಕ ರೋಗ. ಜಗತ್ತಿನ ಜನರ ದೈಹಿಕ, ಮಾನಸಿಕ ಸ್ಥಿತಿಯನ್ನು ಕುಗ್ಗಿಸಿ ಜನರ ಮರಣಕ್ಕೆ ಇದು ಕಾರಣವಾಗಿದೆ. ಇದು ಮಾರಾಣಾಂತಿಕ ರೋಗವಾದರೂ ಸಹ ನಮ್ಮ ವೈಯಕ್ತಿಕ ಜಾಗೃತಿಯಿಂದ ರಕ್ಷಣೆ ಮಾಡಿಕೊಳ್ಳಬಹುದಾಗಿದೆ. ಮುನ್ನೆಚ್ಚರಿಕೆ ಕ್ರಮಗಳನ್ನು ಅಳವಡಿಸಿಕೊಂಡರೆ ಈ ರೋಗದಿಂದ ನಾವು ದೂರ ಉಳಿಯುವುದರ ಜೊತೆಗೆ ಸೋಂಕನ್ನು ಮುಕ್ತವಾಗಿಸಬಹುದು.
ಕೊರೊನಾ ಬಗ್ಗೆ ಇರುವ ವದಂತಿಗಳಿಗೆ ಕಿವಿಗೊಡದೆ, ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಂಡು ರೋಗ ಹರಡದಂತೆ ತಡೆಯುವ ಮೂಲಕ ರೋಗಮುಕ್ತ ವಾತಾವರಣ ನಿರ್ಮಿಸೋಣ ಎಂದು ತಿಳಿಸಿದ್ದಾರೆ.