ಕೊಪ್ಪಳ: ಜಾತಿ, ಧರ್ಮದ ಹೆಸರಿನಲ್ಲಿ ಗದ್ದಲ, ಗಲಾಟೆಗಳು ನಡೆಯುತ್ತಿರುವ ಇಂದಿನ ದಿನಗಳಲ್ಲಿ ಜಾತಿ, ಧರ್ಮಗಳೇನೇ ಇರಲಿ ಸಾಮರಸ್ಯದಿಂದ ಇರಬೇಕು ಎಂಬ ಸಂದೇಶ ಸಾರುವ ಸನ್ನಿವೇಶಗಳು ಆಗಾಗ ಕಂಡು ಬರುತ್ತವೆ. ಇಂತಹ ಸಾಮರಸ್ಯದ ಸನ್ನಿವೇಶಕ್ಕೆ ಕೊಪ್ಪಳದ ಭಾಗ್ಯನಗರ ವ್ಯಕ್ತಿಯೊಬ್ಬರು ಹೊಸ ಉದಾಹರಣೆ.
ಕೊಪ್ಪಳದ ಭಾಗ್ಯನಗರದಲ್ಲಿ ಫಕ್ರುದ್ದೀನ್ ಎಂಬುವವರು ಇಂದು ಮಹಾಶಿವರಾತ್ರಿಯ ಪ್ರಯುಕ್ತ ತನ್ನ ಹಿಂದೂ ಸ್ನೇಹಿತರಿಗಾಗಿ ಸಂಜೆಯ ವೇಳೆ ಉಪಹಾರ ವ್ಯವಸ್ಥೆ ಮಾಡಿದ್ದರು. ಸಾಮಾನ್ಯವಾಗಿ ಶಿವರಾತ್ರಿಯ ದಿನ ಹಿಂದೂಗಳು ಬೆಳಗ್ಗೆಯಿಂದಲೇ ನಿರಾಹಾರ ಉಪವಾಸ ಆಚರಣೆ ಮಾಡುತ್ತಾರೆ. ಇಡೀ ದಿನ ಉಪವಾಸವಿರುವವರು ಸಂಜೆ ವೇಳೆ ಹಣ್ಣು ಹಂಪಲು ತಿಂದು, ಉಪಹಾರ ಸೇವಿಸಿ ತಮ್ಮ ನಿರಾಹಾರ ಉಪವಾಸ ವೃತವನ್ನು ಪೂರ್ಣಗೊಳಿಸುತ್ತಾರೆ. ಈ ಸಂದರ್ಭದಲ್ಲಿ ಫಕ್ರುದ್ದೀನ್ ತನ್ನ ಹಿಂದೂ ಸ್ನೇಹಿತರೆಲ್ಲರನ್ನೂ ಮನೆಗೆ ಆಹ್ವಾನಿಸಿ ಅವರಿಗೆ ಉಪಹಾರ ನೀಡಿದ್ದಾರೆ. ಈ ಮೂಲಕ ಶಿವರಾತ್ರಿಯಲ್ಲಿ ತಾವು ಪಾಲ್ಗೊಳ್ಳುತ್ತೇವೆ. ಧರ್ಮಕ್ಕಿಂತ ಸ್ನೇಹ ಸಂಬಂಧ ಮುಖ್ಯ ಎಂಬ ಸಂದೇಶ ಸಾರಿದ್ದಾರೆ.
ಇದನ್ನೂ ಓದಿ: ಬಸ್ ಹೇಗ್ ಓಡಿಸಿದರೂ ಕಷ್ಟ.. ನಿಗಮಗಳ ಚಾಲಕರಿಗೆ ಬಿಎಂಟಿಸಿ ನೋಟಿಸ್ ಅಸ್ತ್ರ..!
ಮುಂಜಾನೆಯಿಂದ ಉಪವಾಸ ವ್ರತ ಆಚರಿಸಿದ ಹಿಂದೂಗಳು ತಮ್ಮ ಸ್ನೇಹಿತನ ಕುಟುಂಬದ ಸದಸ್ಯರ ಕರೆಗೆ ಓಗೊಟ್ಟು ಸ್ನಾನ, ಪೂಜೆ ಸಲ್ಲಿಸಿದ ನಂತರ ಫಕ್ರುದ್ದೀನ್ ಮನೆಯಲ್ಲಿ ಸೇರಿ ಎಲ್ಲರೂ ಒಟ್ಟಿಗೆ ಕುಳಿತು ಉಪವಾಸ ವೃತ ಪೂರ್ಣಗೊಳಿಸಿದರು.