ಕುಷ್ಟಗಿ (ಕೊಪ್ಪಳ): ಕೊರೊನಾ ಹಿನ್ನೆಲೆಯಲ್ಲಿ ಶಾಲೆ ಪುನಾರಂಭದ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಕೆಗಳು ತದ್ವಿರುದ್ಧವಾಗಿವೆ ಎಂದು ಗ್ರಾಮೀಣಾಭಿವೃಧ್ಧಿ ಸಚಿವ ಕೆ ಎಸ್ ಈಶ್ವರಪ್ಪ ಟೀಕಿಸಿದರು.
ಕುಷ್ಟಗಿ ಸರ್ಕ್ಯೂಟ್ ಹೌಸ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಬೆಳಗ್ಗೆ ಒಂದು ಹೇಳಿಕೆ, ಸಂಜೆ ಒಂದು ಹೇಳಿಕೆ ಕೊಡ್ತಾರೆ. ಮೊದಲು ಅವರಿಬ್ಬರೂ ಸೇರಿ ಒಮ್ಮತದ ನಿರ್ಧಾರಕ್ಕೆ ಬಂದು ಸಲಹೆ ಕೊಡಲಿ, ಆಮೇಲೆ ಯೋಚನೆ ಮಾಡಿದರಾಯಿತು ಎಂದು ವ್ಯಂಗ್ಯವಾಡಿದರು.
ಕೊರೊನಾ ಸಂಬಂಧವಾಗಿ ಶಾಲೆ ಆರಂಭಿಸುವ ಬಗ್ಗೆ ಸರ್ಕಾರ ಇನ್ನೂ ತೀರ್ಮಾನ ಕೈಗೊಂಡಿಲ್ಲ. ಕೊರೊನಾ ಜಗತ್ತಿಗೆ ಸವಾಲಾಗಿದೆ. ಕೊರೊನಾ ವೈರಸ್ ಎದುರಿಸಿ ಶಾಲೆ ಆರಂಭಿಸುವ ಬಗ್ಗೆ ಯೋಚಿಸಲಾಗುತ್ತಿದೆ ಎಂದರು. ಸರ್ಕಾರದೊಂದಿಗೆ ಪ್ರತಿಪಕ್ಷಗಳ ಸಹಕಾರದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಈಶ್ವರಪ್ಪ ಉತ್ತರಿಸಿ, ಸರ್ಕಾರದಲ್ಲಿ ಸಮನ್ವಯತೆಯಿಂದ ಇದ್ದು, ಸರ್ಕಾರ ಫಸ್ಟ್ ಕ್ಲಾಸ್ ಆಗಿದೆ. ಏನೂ ತೊಂದರೆ ಇಲ್ಲ ಎಂದರು. ಪ್ರತಿಪಕ್ಷದವರು ಸರ್ಕಾರಕ್ಕೆ ಕೆಲ ವಿಚಾರದಲ್ಲಿ ಸಹಕಾರ ಕೊಡುತ್ತಾರೆ. ಕೆಲವೊಂದಕ್ಕೆ ಇಲ್ಲ ಅವರಿಗೆ ಸಲಹೆ ಕೊಟ್ಟರೆ ಸಂತೋಷ, ಕೊಡಲಿಲ್ಲ ಎಂದರೆ ನಂಬುವುದಿಲ್ಲ ಎಂದರು.
ರಾಜ್ಯಸಭಾ ಟಿಕೆಟ್ ವಿಚಾರವಾಗಿ ಜೂನ್ 6ರಂದು ಕೋರ್ ಕಮೀಟಿ ಮೀಟಿಂಗ್ನಲ್ಲಿ ಅಂತಿಮವಾಗಲಿದೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ಅವರ ಪುತ್ರ ಏನೂ ಆಗಿರಲಿಲ್ಲ. ಆತ ಸರ್ಕಾರಿ ಕಾರು ಬಳಸಿ ಅಧಿಕಾರಿಗಳೊಂದಿಗೆ ಮೀಟಿಂಗ್ ಮಾಡಿರಲಿಲ್ಲವೇ? ಹಾಗಾದರೆ ಯತೀಂದ್ರ ಸೂಪರ್ ಮುಖ್ಯಮಂತ್ರಿನಾ? ಇದಕ್ಕೆ ಸಿದ್ದರಾಮಯ್ಯ ಅವರು ಮೊದಲು ಉತ್ತರ ಕೊಡಲಿ, ಆಮೇಲೆ ಹೇಳುವೆ ಎಂದರು.