ಕೊಪ್ಪಳ: ಕೊರೊನಾ ಭೀತಿ ನಡುವೆಯೂ ಸುರಕ್ಷತಾ ಕ್ರಮಗಳ ಮೂಲಕ ಜೂನ್ 25 ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳನ್ನು ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಮಕ್ಕಳು ಹಾಗೂ ಪಾಲಕರಲ್ಲಿ ಭಯ ಹೋಗಲಾಡಿಸಿ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲಾಡಳಿತ ವಿಭಿನ್ನ ಪ್ರಯತ್ನ ಮಾಡಿದೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಜೊತೆಗೂಡಿ 'ಜಾಗೃತಿಯೇ ಶ್ರೀರಕ್ಷೆ' ಎಂಬ ಕಿರುಚಿತ್ರವೊಂದನ್ನು ತಯಾರಿಸಿ ಇದರ ಮೂಲಕ ಪೋಷಕರು, ಮಕ್ಕಳಲ್ಲಿ ಇರುವ ಭಯವನ್ನು ಹೋಗಲಾಡಿಸಲು ಪ್ರಯತ್ನಿಸಿದೆ. ಕೊರೊನಾ ಪ್ರತಿದಿನ ಹೆಚ್ಚಾಗುತ್ತಿರುವ ಹಿನ್ನೆಲೆ ಸಹಜವಾಗಿ ಹೊರಗೆ ಬರಲು ಎಲ್ಲರಿಗೂ ಭಯ ಇದ್ದೇ ಇರುತ್ತದೆ. ಇನ್ನು ಪರೀಕ್ಷೆಗೆ ಹೋಗುವುದೋ, ಬೇಡವೋ ಎಂಬುದರ ಬಗ್ಗೆ ಕೂಡಾ ಗೊಂದಲ ಇದೆ.
6:06 ನಿಮಿಷ ಅವಧಿಯ ಈ ಕಿರುಚಿತ್ರದಲ್ಲಿ ಪರೀಕ್ಷೆಯನ್ನು ಹೇಗೆ ಸುರಕ್ಷಿತವಾಗಿ ನಡೆಸಲಾಗುತ್ತದೆ. ಮುಂಜಾಗ್ರತಾ ಕ್ರಮಗಳೇನು..? ಎಂಬುದನ್ನು ತೋರಿಸಲಾಗಿದೆ. ಆದ್ದರಿಂದ ಭಯವಿಲ್ಲದೆ ಪರೀಕ್ಷಾ ಕೇಂದ್ರಗಳಿಗೆ ಬಂದು ವಿದ್ಯಾರ್ಥಿಗಳು ಪರೀಕ್ಷೆ ಬರೆಯಿರಿ ಎಂದು ಮನವಿ ಮಾಡಲಾಗಿದೆ. ಶಿಕ್ಷಕರಾದ ಹನುಮಂತಪ್ಪ ಕುರಿ ಪರಿಕಲ್ಪನೆಯಲ್ಲಿ ಮೂಡಿಬಂದಿರೋ ಈ ಕಿರುಚಿತ್ರವನ್ನುಸುರೇಶ ಕಂಬಳಿ ನಿರ್ವಹಣೆ ಮಾಡಿದ್ದಾರೆ. ಕಿರುಚಿತ್ರ ಅಚ್ಚುಕಟ್ಟಾಗಿ ಮೂಡಿಬರಲು ಅವಿನಾಶ್ ಚೌಹಾಣ್ ಅವರ ಸಂಕಲನ ಮತ್ತು ಛಾಯಾಗ್ರಹಣ ಚಿತ್ರಕ್ಕಿದೆ. ಆಯಾ ಶಾಲಾ ಶಿಕ್ಷಕರ ಮೂಲಕ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಗ್ರೂಪ್ ಮೂಲಕ ಈ ಕಿರುಚಿತ್ರವನ್ನು ಹರಿಯಬಿಟ್ಟು ಜಾಗೃತಿ ಮೂಡಿಸಲಾಗುತ್ತಿದೆ.
ಒಟ್ಟಾರೆಯಾಗಿ ಕೊರೊನಾ ಭೀತಿಯಲ್ಲಿರುವ ಮಕ್ಕಳು ಹಾಗೂ ಪಾಲಕರಿಗೆ ಈ ಕಿರುಚಿತ್ರದ ಮೂಲಕ ಭಯ ಹೋಗಲಾಡಿಸುವ ಪ್ರಯತ್ನ ಮಾಡಲಾಗಿದೆ. ಇನ್ನು ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬುವ ಈ ಕಿರುಚಿತ್ರವನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೂಡಾ ವೀಕ್ಷಿಸಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.