ಗಂಗಾವತಿ: ಗಡ್ಡ, ಮೀಸೆ ಬಿಟ್ಟ ಮಾತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಮಾನವ ಆಗಲಾರರು. ಅದರ ಬದಲಿಗೆ ಬಡವರ ಹಸಿವು ನೀಗಿಸುವ, ಯುವಕರಿಗೆ ಉದ್ಯೋಗ ನೀಡುವ ಮೂಲಕ ದೇಶವನ್ನು ಪ್ರಗತಿಯತ್ತ ಮುನ್ನಡೆಸಿದರೆ ಮಾತ್ರ ವಿಶ್ವಮಾನವ ಆಗಲು ಸಾಧ್ಯ ಎಂದು ಮಾಜಿ ಸಚಿವ, ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ಹೇಳಿದರು.
ಕಾರಟಗಿ ಪಟ್ಟಣದಲ್ಲಿ ಈ ಬಗ್ಗೆ ಮಾತನಾಡಿದ ಅವರು, ಮೋದಿ ಅವರು ಅಧಿಕಾರಕ್ಕೆ ಬಂದ ಬಳಿಕ ದೇಶದ ಪರಿಸ್ಥಿತಿ ಏನಾಗಿದೆ? ಮೋದಿ ಬಗ್ಗೆ ಸುಖಾಸುಮ್ಮನೆ ವಿಶ್ವಮಾನವ ಎಂದು ಹೇಳಿಕೊಂಡರೆ ಸಾಲದು. ದಾಡಿ, ಮೀಸೆ ಬಿಟ್ಟ ಮಾತ್ರಕ್ಕೆ ವಿಶ್ವಮಾನವ ಆಗಲಾರರು. ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡಿ, ಸಕಲ ಸೌಲಭ್ಯಗಳನ್ನು ಕಲ್ಪಿಸಿಕೊಡಿ. ಆ ಮೂಲಕ ನೀವು ವಿಶ್ವಮಾನವ ಆಗಲು ಸಾಧ್ಯ. ಈ ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ದೇಶದ ಸ್ಥಿತಿ ಹೇಗಿತ್ತು? ಎಂದು ಅವಲೋಕನ ಮಾಡಿ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ರಾಜ್ಯದಲ್ಲಿ ಎಷ್ಟು ಜಿಲ್ಲೆಗಳಿವೆ ಎಂಬುವುದರ ಸಾಮಾನ್ಯ ಜ್ಞಾನವಿಲ್ಲ. ಇಂಥವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಿದೆ. ಇದು ಆ ಪಕ್ಷದ ದುರಂತ. ರಾಜ್ಯ, ದೇಶದ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಬಿಜೆಪಿಯ ಬಹುತೇಕ ನಾಯಕರಿಗೆ ಗೊತ್ತಿಲ್ಲ ಎಂದು ಟೀಕಿಸಿದರು.
ಸಿ.ಟಿ.ರವಿಗೆ ಬೇರೇನು ಕೆಲಸವಿಲ್ಲ. ಧರ್ಮ, ದೇಶದ ಬಗ್ಗೆ ಮಾತನಾಡುವುದಷ್ಟೇ ಕೆಲಸ. ಇದನ್ನು ಬಿಡಿ. ಧರ್ಮ, ಜಾತಿ, ಜನಾಂಗ, ದೇವರ ಬಗ್ಗೆ ಸಂಬಂಧಿತ ಅಧಿಕಾರಿಗಳು ಗಮನ ಹರಿಸುತ್ತಾರೆ. ನೀವು ಜನಸಾಮಾನ್ಯರಿಗಾಗಿ ಏನು ಮಾಡಿದ್ದೀರಿ ಎಂಬುವುದು ಹೇಳಿ? ಎಂದು ತಂಗಡಗಿ ಒತ್ತಾಯಿಸಿದರು.
ಇದನ್ನೂ ಓದಿ: 'ಅಶ್ವತ್ಥ್ ನಾರಾಯಣ್‌ಗೂ ರಾಮನಗರಕ್ಕೂ ಏನ್ ಸಂಬಂಧ?, ಕುಮಾರಸ್ವಾಮಿಯಾದ್ರೂ ಒಂದಷ್ಟು ಕಟ್ಟಡ ಕಟ್ಟಿದ್ದಾರೆ'