ಕೊಪ್ಪಳ : ಗೆದ್ದ ಪಕ್ಷವನ್ನು ಬಿಟ್ಟು ಬಾಂಬೆಗೆ ಓಡಿ ಹೋದಾಗ ಸಚಿವ ಬಿ.ಸಿ.ಪಾಟೀಲ್ ಅವರಿಗೆ ತಾವು ಹೇಡಿ ಅಂತ ಅನ್ನಿಸಲಿಲ್ಲವೇ? ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಪ್ರಶ್ನಿಸಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಸಿರು ಶಾಲು ಹಾಕಿಕೊಂಡು ಪ್ರಮಾಣವಚನ ಸ್ವೀಕರಿಸಿದರೆ ಸಾಲದು. ರೈತರ ಬಗ್ಗೆ ಕಾಳಜಿಯೂ ಇರಬೇಕಾಗುತ್ತದೆ. ಅದರಲ್ಲೂ ಕೃಷಿ ಸಚಿವರಾಗಿ ರೈತರ ಆತ್ಮಹತ್ಯೆ ಬಗ್ಗೆ ಈ ರೀತಿ ಹೇಳಿಕೆ ನೀಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಓದಿ - ಕೃಷಿ ಸಚಿವರ ಹೇಳಿಕೆಗೆ 'ಕೈ' ಆಕ್ರೋಶ: ಬಿ.ಸಿ.ಪಾಟೀಲ್ ಸ್ಪಷ್ಟೀಕರಣ
ಅಲ್ಲದೇ ಕಾಂಗ್ರೆಸ್ ಪಕ್ಷ ತೊರೆದು, ರಾಜೀನಾಮೆ ನೀಡಿ ಪಕ್ಷವೆಂಬ ತಾಯಿಗೆ ಮೋಸಮಾಡಿ ಬಾಂಬೆಗೆ ಓಡಿಹೋದಾಗ ಹೇಡಿ ಅಂತ ಅನಿಸಲಿಲ್ಲವೇ? ಎಂದು ಪಾಟೀಲರಿಗೆ ಪ್ರಶ್ನಿಸಿದರು. ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ನಿಜವಾಗಿಯೂ ರೈತರ ಮೇಲೆ ಕಾಳಜಿ, ಅಭಿಮಾನವಿದ್ದರೆ ಪಾಟೀಲ್ ಅವರಿಂದ ರಾಜೀನಾಮೆ ಪಡೆದು ಮನೆಗೆ ಕಳಿಸಬೇಕು ಎಂದು ತಂಗಡಗಿ ಆಗ್ರಹಿಸಿದರು.
ಆತ್ಮಹತ್ಯೆ ಮಾಡಿಕೊಳ್ಳುವ ರೈತರಿಗೆ ಧೈರ್ಯ ತುಂಬುವ ಕೆಲಸವನ್ನು ಸರ್ಕಾರ ಮತ್ತು ಕೃಷಿ ಸಚಿವರು ಮಾಡಬೇಕು. ಆದ್ರೆ ರೈತರ ಬಗ್ಗೆ ಈ ರೀತಿ ಅವಹೇಳನವಾಗಿ ಮಾತನಾಡಿರೋದು ಬಿ.ಸಿ.ಪಾಟೀಲ್ ಅವರ ದುರಹಂಕಾರದ ಪರಮಾವಧಿ ಎಂದು ಕಿಡಿಕಾರಿದರು.
ಓದಿ - ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು, ಹಾಗೆ ಮಾಡುವವರು ಹೇಡಿಗಳು: ಬಿ.ಸಿ.ಪಾಟೀಲ್
ನಾನು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿಲ್ಲ. ಅಂತಹ ಪ್ರಸಂಗ ಬಂದಿಲ್ಲ. ರಾಜೀನಾಮೆ ಕೇಳಿದರೆ ಕೊಡುತ್ತೇನೆ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.