ಕೊಪ್ಪಳ: ಸಿದ್ದರಾಮಯ್ಯನವರ ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ನೈತಿಕತೆ ಇಲ್ಲ ಎಂದು ಮಾಜಿ ಸಚಿವ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ಹೇಳಿದ್ದಾರೆ.
ತಾಲೂಕಿನ ಬಸಾಪುರ ಬಳಿಯ ಖಾಸಗಿ ಏರ್ಪೋರ್ಟ್ನಲ್ಲಿ ಮಾತನಾಡಿ, ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಸೋಮಶೇಖರ್, ಭೈರತಿ ಬಸವರಾಜ್ ಹಾಗೂ ಮುನಿರತ್ನ ಅವರನ್ನು ಎಸ್ಬಿಎಂ ಎಂದು ಕರೆಯುತ್ತಿದ್ದರು. ಇವರೆಲ್ಲ ಸಿದ್ದರಾಮಯ್ಯನವರಿಂದ ಆಗ ಲಾಭ ಪಡೆದಿದ್ದಾರೆ, ಈಗ ಏನೇನೋ ಮಾತಾಡ್ತಾರೆ. ಸಿದ್ದರಾಮಯ್ಯನವರ ಬಗ್ಗೆ ಮಾತನಾಡುವುದಕ್ಕೆ ಇವರಿಗೆ ಯಾವ ನೈತಿಕತೆ ಇದೆ. ಕಾಂಗ್ರೆಸ್ನಿಂದ ಹೊರ ಹೋದ 17 ಶಾಸಕರನ್ನು ಬಿಜೆಪಿ ಬೀದಿಗೆ ನಿಲ್ಲಿಸುತ್ತದೆ. ಈ ಹಿಂದೆ ಸರ್ಕಾರ ರಚಿಸಲು ಸಹಾಯ ಮಾಡಿದ್ದ ನಮಗೂ ಬಿಜೆಪಿ ಮೋಸ ಮಾಡಿತ್ತು. ಬಿಜೆಪಿಯವರಿಗೆ ಅಧಿಕಾರ ಮಾಡಲು ಬರುವುದಿಲ್ಲ. ಅವರೇನಿದ್ದರೂ ಪ್ರತಿಪಕ್ಷದಲ್ಲಿರುವುದಕ್ಕೆ ಮಾತ್ರ ಲಾಯಕ್ಕು ಎಂದು ಹೇಳಿದರು.
ಕೊರೊನಾದ ಈ ಸಂಕಷ್ಟದ ಕಾಲದಲ್ಲಿ ಬಡವರು, ಕಾರ್ಮಿಕರು, ಸಾಮಾನ್ಯ ಜನರು ಚೇತರಿಸಿಕೊಳ್ತಿದ್ದಾರೆ ಎಂದರೆ ಅದು ಯುಪಿಎ ಸರ್ಕಾರ ಹಾಗೂ ಸಿದ್ದರಾಮಯ್ಯನವರ ಅವಧಿಯಲ್ಲಿ ಜಾರಿಯಾದ ಯೋಜನೆಗಳಿಂದ. ಅನ್ನಭಾಗ್ಯ, ನರೇಗಾ ಯೋಜನೆಗಳು ಸಂಕಷ್ಟದ ಸಮಯದಲ್ಲಿ ಜನರ ಬದುಕಿಗೆ ದಾರಿಯಾಗಿದೆ. ಬಿಜೆಪಿ ಇಂತಹ ಯಾವುದಾದರೂ ಯೋಜನೆ ಮಾಡಿದೆಯಾ ಹೇಳಲಿ ನೋಡೋಣ. ಅವರದ್ದು ಬರೀ ತಮಟೆ ಬಾರಿಸೋದು, ದೀಪ ಹಚ್ಚೋದು, ಚಪ್ಪಾಳೆ ತಟ್ಟೋದು ಮಾತ್ರ. ಇದರಿಂದ ಜನರು ಬದುಕಲು ಸಾಧ್ಯನಾ ಎಂದು ಪ್ರಶ್ನಿಸಿದರು.